
ಮಂಗಳೂರು : ಹನ್ನೆರಡರ ಹರೆಯದ ಬಾಲಕನ ಎದೆಗೆ ಹೊಕ್ಕಿದ್ದ ತೆಂಗಿನಗರಿಯನ್ನು ನಗರದ ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವ ಮೂಲಕ ಬಾಲಕನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಹೃದಯ, ಎದೆ ಮತ್ತು ರಕ್ತನಾಳದ ಶಸ್ತ್ರಚಿಕಿತ್ಸೆ ವಿಭಾಗದ ಸಂಪೂರ್ಣ ತಂಡ, ಡಾ. ಸುರೇಶ್ ಪೈ ಅವರ ನೇತೃತ್ವದಲ್ಲಿ, ಅವರ ಅಸಾಧಾರಣ ಕೌಶಲ್ಯ ಮತ್ತು ನಿಷ್ಠೆಗಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮೂಲತಃ ಅಸ್ಸಾಂ ರಾಜ್ಯದ ಪ್ರಸ್ತುತ ಮಡಿಕೇರಿಯಲ್ಲಿ ಕೆಲಸದಲ್ಲಿದ್ದ ಬಾಲಕ ಬಿದ್ದು ಮರದ ತುಂಡು ಅವನ ಕುತ್ತಿಗೆಗೆ ಪ್ರವೇಶಿಸಿ ಎದೆಯಲ್ಲಿ ಸಿಕ್ಕಿಕೊಂಡಿತ್ತು. ಸಂಜೆ 7.30 ಕ್ಕೆ ಆಘಾತಕ್ಕೊಳಗಾದ ನಂತರ ಮಧ್ಯರಾತ್ರಿ 12.15 ಕ್ಕೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಯಿತು.
ಮಧ್ಯರಾತ್ರಿ 1.30 ರಿಂದ 3.30 ರವರೆಗೆ ಶಸ್ತ್ರಚಿಕಿತ್ಸೆ ನಡೆಯಿತು. ಮರದ ತುಂಡಿನ ಜೊತೆಗೆ ಸ್ಟೀಲ್ ಚೈನ್ ಕೂಡ ಸಿಲುಕಿಕೊಂಡಿತ್ತು, ಮರದ ತುಂಡು ಮತ್ತು ಸ್ಟೀಲ್ ಚೈನ್ ಶಸ್ತ್ರಚಿಕಿತ್ಸೆಯಿಂದ ಹೊರತೆಗೆದು ಯುವ ಜೀವವನ್ನು ಉಳಿಸುವಲ್ಲಿ ಸಿಟಿವಿಎಸ್ ವೈದ್ಯಕೀಯ ತಂಡದ ಅಸಾಧಾರಣ ಪ್ರಯತ್ನ ಮಹತ್ತರವಾಗಿದೆ. ಶಸ್ತ ಚಿಕಿತ್ಸೆಯ ಬಳಿಕ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ದೊರಕಿದೆ.
ವೆನ್ಲಾಕ್ ಆಸ್ಪತ್ರೆಯ ವೈದ್ಯರ ತಂಡ ಬಹಳ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದೆ. ಒಂದು ವೇಳೆ ಇದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದಿದ್ದರೆ, 10 ಲಕ್ಷ ರೂ. ತನಕ ಖರ್ಚಾಗುತ್ತಿತ್ತು. ವೆನ್‌ವಾಕ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯ ಯಾವುದೇ ಖರ್ಚಿಲ್ಲದೆ ನಡೆಸಲಾಗಿದೆ. ವೈದ್ಯರ ಸಾಧನೆಯನ್ನು ಡಿಎಂಒ ಡಾ.ಶಿವಪ್ರಕಾಶ್ ಶ್ಲಾಘಿಸಿದ್ದಾರೆ. ಅಪರೂಪದ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ತಮ್ಮ ಮಗನ ಜೀವ ಉಳಿಸಿರುವ ವೆನ್ಲಾಕ್ ಆಸ್ಪತ್ರೆಯ ಎಲ್ಲ ವೈದ್ಯರಿಗೆ ಅಸ್ಸಾಂ ಮೂಲದ ಬಾಲಕನ ಪೋಷಕರಾದ ಅನ್ವರ್ ಹಾಗೂ ಅಸ್ಮಾ ಖಾತೂನ್ ಕೃತಜ್ಞತೆ ಸಲ್ಲಿಸಿದ್ದಾರೆ.