
ಇತ್ತೀಚಿಗಿನ ದಿನಗಳಲ್ಲಿ ಬೋರ್‌ವೆಲ್‌ಗೆ ಮಕ್ಕಳು ಬೀಳುತ್ತಿರುವ ಘಟನೆಗಳು ಕಡಿಮೆಯಾದರೂ, ಅಲ್ಲಲ್ಲಿ ಇಂತಹ ದುರಂತಗಳು ಸಂಭವಿಸುತ್ತಲೇ ಇದೆ. ಸದ್ಯ ರಾಜಸ್ಥಾನದ ದೌಸಾದಲ್ಲಿ ನಡೆದ ಘಟನೆ ದೇಶಾದ್ಯಂತ ಸುದ್ದಿಯಾಗಿದೆ.
ಬೋರ್‌ವೆಲ್‌ಗೆ ಬಿದ್ದಿದ್ದ ಬಾಲಕನನ್ನು 55 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಹೊರಗೆ ತೆಗೆದರೂ ಪ್ರಾಣ ಉಳಿಯಲಿಲ್ಲ. 150 ಅಡಿ ಆಳದ ಬೋರ್‌ವೆಲ್‌ಗೆ 5 ವರ್ಷದ ಆರ್ಯನ್ ಬಿದ್ದಿದ್ದ. ಆತನನ್ನು ಹೊರ ತೆಗೆಯುವಷ್ಟರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ.ಕೂಡಲೇ ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಡಿ.9 ರ ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಕಾಲಿಖಾಡ್ ಗ್ರಾಮದ ಗದ್ದೆಯಲ್ಲಿ ಆಟವಾಡುತ್ತಿದ್ದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದ. ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಿ ಸಮಾನಾಂತರ ಹೊಂಡ ತೆಗೆಯಲಾಗಿದೆ.
ರಕ್ಷಣಾ ಕಾರ್ಯಗಳ ಕುರಿತು ಮಾಹಿತಿ ನೀಡಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಅಸಂಖ್ಯಾತ ಸವಾಲುಗಳಿವೆ ಎಂದು ಹೇಳಿದ್ದರು ನೀರಿನ ಮಟ್ಟ ಸುಮಾರು 160 ಅಡಿ ಎಂದು ಅಂದಾಜಿಸಲಾಗಿತ್ತು.
ಕಾರ್ಯಾಚರಣೆ ಸಂದರ್ಭದಲ್ಲಿ ಯಂತ್ರವು ಕೆಟ್ಟು ಹೋಗಿ ಹೊಸ ಯಂತ್ರವನ್ನು ತರಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಸೆಪ್ಟೆಂಬರ್‌ನಲ್ಲಿ, ದೌಸಾದ ಬಂಡಿಕುಯಿ ಪ್ರದೇಶದಲ್ಲಿ 35 ಅಡಿ ತೆರೆದ ಬೋರ್‌ವೆಲ್‌ನಿಂದ ಎರಡು ವರ್ಷದ ಬಾಲಕಿಯನ್ನು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ 18 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿತ್ತು.ಬಾಲಕಿ 28 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು.