
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವೃಕ್ಷ ಮಾತೆ, ಪದ್ಮಶ್ರೀ ಪುರಸ್ಕೃತೆ, ಹಸಿರುಕ್ರಾಂತಿಯ ನಾಯಕಿ ತುಳಸಿ ಗೌಡ ಅವರು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ತುಳಸಿ ಅವರಿಗೆ 87 ವರ್ಷ ವಯಸ್ಸಾಗಿತ್ತು. ತಮ್ಮ ಇಳಿ ವಯಸ್ಸಿನಲ್ಲಿಯೂ ಪರಿಸರ ಕಾಳಜಿ ಹೊಂದಿದ್ದ ತುಳಸಿ ಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ನಿವಾಸಿ. ಹೊನ್ನಳ್ಳಿ ಗ್ರಾಮದ ನಾರಾಯಣ ಮತ್ತು ನೀಲಿ ದಂಪತಿಯ ಪುತ್ರಿಯಾಗಿರುವ ತುಳಸಿ ಗೌಡ 1944ರಲ್ಲಿ ಜನಿಸಿದರು.
ಸಾಲು ಸಾಲು ಗಿಡ ನೆಟ್ಟು ಪೋಷಿಸಿ ಬೆಳಸಿದ್ದರು. ಪರಿಸರ ಕಾಳಜಿ ಹಿನ್ನಲೆ 2020 ರಲ್ಲಿ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದರು. ತುಳಸಿ ಗೌಡ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದ ತುಳಸಿ ಗೌಡ ಅವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ತುಳಸಿ ಗೌಡ ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದವರು.
ಕಳೆದ 6 ದಶಕಗಳಿಂದ ಯುವ ತಲೆಮಾರಿಗೆ ಮಾರ್ಗದರ್ಶನ, ತರಬೇತಿ ನೀಡುತ್ತಿದ್ದ ತುಳಸಿ ಗೌಡ, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು. 14 ವರ್ಷಗಳ ನಂತರ ಅವರು ಸೇವೆಯಿಂದ ನಿವೃತ್ತರಾಗಿದ್ದು, ನಂತರ ಪಿಂಚಣಿ ಪಡೆದು ಜೀವನ ಸಾಗಿಸುತ್ತಿದ್ದರು.