
ಮಂಡ್ಯದಲ್ಲಿ ಆಸ್ತಿಗಾಗಿ ಸ್ವಂತ ತಮ್ಮನನ್ನೇ ಹತ್ಯೆ ಮಾಡಲು ಅಣ್ಣನೇ ಐದು ಲಕ್ಷ ರೂಪಾಯಿ ಸುಪಾರಿ ನೀಡಿದ್ದ. ಇತ್ತ ಸುಪಾರಿ ಪಡೆದ ಪಾತಕಿಗಳು ತಮ್ಮನ ಹತ್ಯೆ ಮಾಡಿದ್ದರೆ, ಅತ್ತ ಸುಪಾರಿ ನೀಡಿದ್ದ ಅಣ್ಣ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿ ಪಾಪ ತೊಳೆದುಕೊಳ್ಳಲು ಹೋಗಿದ್ದ. ಈ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲಿ ಹಂತಕನೋರ್ವ ಕೊಲೆ ಮಾಡಿ ಬಳಿಕ ಕುಂಭಮೇಳಕ್ಕೆ ಪರಾರಿಯಾಗಿದ್ದಾನೆ.
ಕಳೆದ ಜನವರಿ 30ರಂದು ಮನೆಯಿಂದ ಕಾಣೆಯಾಗಿದ್ದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ರಾಹುಲ್ ಶವ ಪತ್ತೆಯಾಗಿದೆ. ಮಹಾರಾಷ್ಟ್ರದ ಸಾಂಗ್ಲೆ ಬಳಿಯ ಬೆಣ್ಣೆತೋರಾ ಹಿನ್ನೀರಿನಲ್ಲಿ ರಾಹುಲ್ ಮೃತದೇಹ ಪತ್ತೆಯಾಗಿದ್ದು, ಕೊಲೆ ಮಾಡಿ ಬಳಿ ಮೃತದೇಹವನ್ನು ಸಿಗದಂತೆ ನೀರಿನೊಳಗೆ ಬಿಸಾಡಿ ಹೋಗಿದ್ದಾರೆ.
ಈ ಸಂಬಂಧ ಕಾರ್ಯಚರಣೆ ನಡೆಸಿದ ಆಳಂದ ಪೊಲೀಸರು, ಕೊಲೆ ಮಾಡಿದ ಐವರ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನೋರ್ವ ಪ್ರಮುಖ ಆರೋಪಿ ಕುಂಭಮೇಳಕ್ಕೆ ತೆರಳಿದ್ದಾನೆ ಎನ್ನುವ ಮಾಹಿತಿ ತಿಳಿದುಬಂದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಜೂರಿ ಗ್ರಾಮದ ರಾಹುಲ್ 2025, ಜನವರಿ 30ರಂದು ಕಾಣೆಯಾಗಿದ್ದ. ಈ ಸಂಬಂಧ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಆದರೂ ರಾಹುಲ್ ಪತ್ತೆಯಾಗಿರಲಿಲ್ಲ. ಆದ್ರೆ, ಇದೀಗ ರಾಹುಲ್ ಮೃತದೇಹ ಮಹಾರಾಷ್ಟ್ರದ ಸಾಂಗ್ಲೆ ಬಳಿಯ ಬೆಣ್ಣೆತೋರಾ ಹಿನ್ನೀರಿನಲ್ಲಿ ಪತ್ತೆಯಾಗಿದೆ.
ರಾಹುಲ್ ಖಜೂರಿಯನ್ನ ಕೊಲೆ ಮಾಡಿ ಬಳಿಕ ಹಂತಕರು ಮೃತದೇಹಕ್ಕೆ ಕಲ್ಲು ಕಟ್ಟಿ ನೀರಿನೊಳಗೆ ಬಿಸಾಡಿದ್ದಾರೆ. ಶವ ಮೇಲೆ ತೇಲದಂತೆ ಬೃಹತ್ ಕಲ್ಲು ಕಟ್ಟಿದ್ದಾರೆ. ಈ ಸಂಬಂಧ ಅಳಂದ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಪವನ್ ಹಾಗೂ ಓರ್ವ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತರನ್ನು ಪೊಲೀಸರ ವಿಚಾರಣೆಗೊಳಪಡಿಸಿದಾಗ ಎ1 ಆರೋಪಿ ಕುಂಭಮೇಳಕ್ಕೆ ಎಸ್ಕೇಪ್ ಆಗಿರುವುದನ್ನು ಬಾಯ್ವಿಟ್ಟಿದ್ದಾರೆ. ಯುವತಿಯ ವಿಚಾರದಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಆಳಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.