ಉಡುಪಿ : ರೈಲಿನಲ್ಲಿ ಒಂಟಿಯಾಗಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.
ರೈಲಿನಲ್ಲಿ ಸಂಚರಿಸುತ್ತಿದ್ದ ಬಾಲಕನ ಚಲನವಲನದಲ್ಲಿ ಅನುಮಾನಗೊಂಡ ಪ್ರಯಾಣಿಕರು, ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಲಕನನ್ನು ವಿಚಾರಿಸಿದಾಗ, ಆತನ ಹೆಸರು ಸೂರಜ್ ಓಮಿ ಎಂಬುದು ತಿಳಿದುಬಂದಿದೆ. ಆತ ಪುಣೆಯ ವಸತಿ ಶಾಲೆಯ ವಿದ್ಯಾರ್ಥಿಯಾಗಿದ್ದು, ಶಿಕ್ಷಣ ಸಂಸ್ಥೆಗೆ ಮಾಹಿತಿ ನೀಡದೆ ಪರಾರಿಯಾಗಿದ್ದ ಎನ್ನಲಾಗಿದೆ.
ಈ ಬಗ್ಗೆ ರೈಲ್ವೆ ಪೊಲೀಸರು ಸಮಾಜ ಸೇವಕ ನಿತ್ಯಾನಂದ ಒಳಕಾಡು ನೆರವು ಪಡೆದರು. ನಿತ್ಯಾನಂದ ಒಳಕಾಡು ಘಟನಾ ಸ್ಥಳಕ್ಕೆ ಬಂದು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ಬಾಲಕನಿಗೆ ದೊಡ್ಡಣಗುಡ್ಡೆಯಲ್ಲಿರುವ ಸರಕಾರಿ ಬಾಲಕರ ಬಾಲ ಭವನದಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರದ ಸಿಬ್ಬಂದಿಯ ಉಪಸ್ಥಿತಿಯಲ್ಲಿ ಪುರ್ನವಸತಿ ಕಲ್ಪಿಸಿದ್ದಾರೆ.
