ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಎಲತ್ತೂರಿನಲ್ಲಿ ಕೃಷಿಕನೋರ್ವನ ಮೇಲೆ ಚಿರತೆ ದಾಳಿ ನಡೆಸಿದೆ. ನ.03 ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದ್ದು ದನಗಳಿಗೆ ಹುಲ್ಲು ತರಲು ತೆರಳಿದ್ದ ಕೃಷಿಕನ ಮೇಲೆ ಚಿರತೆ ದಾಳಿ ಮಾಡಿದೆ.
ಕಲ್ಕರೆ ನಿವಾಸಿ ಲಿಗೋರಿ ಪಿರೇರಾ (65) ಚಿರತೆ ದಾಳಿಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಎಳತ್ತೂರು ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು ಚಿರತೆ ದಾಳಿಗೆ ಹೆದರದೆ ಲಿಗೋರಿ ಅವರು ಕೈಯಲ್ಲಿದ್ದ ಕೋಲನ್ನು ಚಿರತೆ ಮೇಲೆ ಬೀಸಿದ್ದಾರೆ. ಇದರಿಂದ ಗಾಬರಿಗೊಂಡ ಚಿರತೆ ಕಾಡಂಚಿಗೆ ಪರಾರಿಯಾಗಿದೆ.
ಚಿರತೆ ದಾಳಿಯಿಂದ ಲಿಗೋರಿ ಅವರ ಮುಖಕ್ಕೆ ಮತ್ತು ಬೆನ್ನಿಗೆ ಗಾಯಗಳಾಗಿದ್ದು ಕಟೀಲು ದುರ್ಗಾ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಗಾಯಗಳಿಗೆ ಹೊಲಿಗೆ ಹಾಕಲಾಗಿದೆ.
ಕಳೆದೊಂದು ವಾರದಿಂದ ಚಿರತೆ ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದು, ಅನೇಕ ಮನೆಗಳ ನಾಯಿ, ಸಣ್ಣ ಜಾನುವಾರುಗಳು ಚಿರತೆಗೆ ಆಹಾರವಾಗಿದೆ.
ಆದ್ರೆ ಇದೀದ ಮನುಷ್ಯರ ಮೇಲೂ ದಾಳಿ ಮಾಡಿದ್ದು ಆತಂಕ ಸೃಷ್ಟಿಸಿದ್ದು, ಕಾಡು ಮತ್ತು ಕೃಷಿ ಚಟುವಟಿಕೆಗಳೆ ಅಧಿಕವಿದ್ದು ಜನಸಂಚಾರ ವಿರಳವಿರುವ ಈ ಪ್ರದೇಶದಲ್ಲಿ ಶಾಲೆಗೆ ಪುಟ್ಟ ಮಕ್ಕಳನ್ನು ಕಳಿಸಲು ಜನ ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿಯ ಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.