ಡಬಲ್ ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಹಾಗೂ ವಿಶ್ವ ಚೆಸ್ ಚಾಂಪಿಯನ್ಶಿಪ್ ವಿಜೇತ ಡಾ ಗುಕೇಶ್ ಜೊತೆ ಒಟ್ಟು ನಾಲ್ಕು ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ ಖೇಲ್ ರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಮನು ಭಾಕರ್ ಹಾಗೂ ಗುಕೇಶ್ ಜೊತೆ ಭಾರತೀಯ ಪುರುಷರ ಹಾಕಿ ಟೀಂನ ನಾಯಕ ಹರ್ಮನ್ಪ್ರೀತ್ ಸಿಂಗ್ ಹಾಗೂ ಪ್ಯಾರಾ ಒಲಿಂಪಿಯನ್ ಪ್ರವೀಣ್ ಕುಮಾರ್ಗೂ ಕೂಡ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಜನವರಿ 17 ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮತ್ತು ಸರಿಯಾದ ಪರಿಶೀಲನೆಯ ನಂತರ ಕ್ರೀಡಾಪಟುಗಳು, ತರಬೇತುದಾರರು, ವಿಶ್ವವಿದ್ಯಾಲಯ ಮತ್ತು ಘಟಕಗಳಿಗೆ ಪ್ರಶಸ್ತಿಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಕ್ರೀಡಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
