ಕಾರವಾರ : ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳ ಗುಂಪೊಂದು ತಲ್ವಾರ್ ನಿಂದ ಕಡಿದು ಕೊಲೆ ಮಾಡಿದ ಘಟನೆ ಕಾರವಾರದ ಹಣಕೋಣ ಗ್ರಾಮದಲ್ಲಿ ಭಾನುವಾರ ನಸುಕಿನ ಜಾವ ನಡೆದಿದೆ.
ಕೊಲೆಯಾದವರನ್ನು ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು ನಾಯ್ಕ (58) ಎಂದು ಗುರುತಿಸಲಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಆಮದು, ರಫ್ತು ವಹಿವಾಟು ನಡೆಸುತ್ತಿರುವ ಉದ್ಯಮಿ ತನ್ನ ಊರಾದ ಹಣಕೋಣಕ್ಕೆ ವಾರದ ಹಿಂದೆ ಬಂದಿದ್ದರು. ಭಾನುವಾರ ಪುಣೆಗೆ ಹೊರಡಲು ಸಿದ್ದರಾಗಿದ್ದರು. ನಸುಕಿನ ಜಾವ 5.30ರ ಸುಮಾರಿಗೆ ಅವರ ಹತ್ಯೆ ಮಾಡಲಾಗಿದೆ.
‘ನಾಲ್ಕರಿಂದ ಐದು ಜನರಿದ್ದ ಗುಂಪೊಂದು ಮನೆಗೆ ನುಗ್ಗಿ ಕೃತ್ಯ ನಡೆಸಿದೆ. ವಿನಾಯಕ ಅವರ ಪತ್ನಿ ವೃಶಾಲಿ ಅವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಇವರಿಬ್ಬರೇ ಮನೆಯಲ್ಲಿದ್ದರು’ ಎಂದು ಚಿತ್ತಾಕುಲ ಠಾಣೆ ಪೊಲೀಸರು ತಿಳಿಸಿದ್ದಾರೆ. ಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.