Mangalore and Udupi news
ಉಡುಪಿಪ್ರಸ್ತುತ

ಉಡುಪಿ: ಲಂಡನ್‌ನಲ್ಲಿ ಹಿಬ್ರು ಭಾಷೆ ರದ್ದು ಮಾಡಿ ಸಂಸ್ಕೃತ ಕಲಿಸುತ್ತಿದ್ದಾರೆ; ಪುತ್ತಿಗೆ ಶ್ರೀ

ಇತ್ತೀಗಷ್ಟೇ ಉಡುಪಿಯ ಪುತ್ತಿಗೆ ಮಠಾಧೀಶರು ನೀಡಿದ್ದ ಹೇಳಿಕೆ ಸಾಕಷ್ಟು ಸುದ್ದಿಯಾಗಿತ್ತು. ಸಂಸ್ಕೃತ ಗೊತ್ತಿದ್ದರಷ್ಟೇ ಸ್ವರ್ಗಕ್ಕೆ ಪ್ರವೇಶ ಎಂದಿದ್ದರು. ಸರ್ವ ಭಾಷೆಗಳಿಗೆ ಮೂಲ ಸಂಸ್ಕೃತ. ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ. ತುಳು, ಕನ್ನಡ, ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಗಳು ಹುಟ್ಟಿಕೊಂಡಿರುವುದೇ ಸಂಸ್ಕೃತದಿಂದ ಎಂದು ಹೇಳಿಕೆ ಕೊಟ್ಟಿದ್ದು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು. ಈಗ ಆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪರ್ಯಾಯ ಪುತ್ತಿಗೆ ಮಠ ಶ್ರೀಕೃಷ್ಣ ಮಠ ಉಡುಪಿ ಆಶ್ರಯದಲ್ಲಿ ರಾಜ್ಯ ಸಂಸ್ಕೃತ ಭಾಷಾ ಶಿಕ್ಷಕ ಸಂಘ ಬೆಂಗಳೂರು ಸಹಕಾರದೊಂದಿಗೆ ಉಡುಪಿ ಜಿಲ್ಲಾ ಸಂಸ್ಕೃತ ಶಿಕ್ಷಕ ಸಂಘ ಆಯೋಜಿಸಲಾದ ಸಂಸ್ಕೃತೋತ್ಸವ ಮತ್ತು ಸಂಸ್ಕೃತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಭಾಷೆ ಬಗ್ಗೆ ಏನು ಮಾತಾಡಿದರೂ ವಿವಾದ ಮಾಡುತ್ತಿದ್ದಾರೆ. ಯಾಕೆಂದರೆ ಅವರಿಗೆ ಅದರ ಬಗ್ಗೆ ಇರುವ ಹೊಟ್ಟೆಕಿಚ್ಚು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಜಗತ್ತಿನ ಯಾವ ಭಾಷೆಗೂ ಸಂಸ್ಕೃತದ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಲಿಲ್ಲ. ಸಂಸ್ಕೃತ ಭಾಷೆಯನ್ನು ಹೆಚ್ಚು ಸಂಪೋಷಣೆ ಮಾಡಿದಷ್ಟು ಉಳಿದ ಭಾಷೆಗಳು ಹೆಚ್ಚು ಬೆಳೆಯುತ್ತ ಹೋಗುತ್ತವೆ. ತಾಯಿಯಂತೆ ಪೊರೆಯುವ ಗುಣ ಸಂಸ್ಕೃತದ್ದು. ಭಾಷಾ ಕಲಿಕೆಗೊಂದು ಮೂಲಭೂತ ಚೌಕಟ್ಟು ಸಂಸ್ಕೃತದಿಂದ ಪಡೆದರೆ ಉಳಿದ ಯಾವುದೇ ಭಾಷಾಕಲಿಕೆ ಕೂಡ ಸುಲಭ ಸಾಧ್ಯ. ವಿದೇಶಿಯರು ಸಂಸ್ಕೃತದ ಬಗ್ಗೆ ಹೆಚ್ಚು ಆಸಕ್ತಿ ಪ್ರೀತಿ ಹೊಂದಿದ್ದಾರೆ. ಲಂಡನ್ ನಲ್ಲಿ ಹಿಬ್ರು ಭಾಷೆ ಯನ್ನು ರದ್ದು ಮಾಡಿ ಅದರ ಬದಲಿಗೆ ಸಂಸ್ಕೃತ ಕಲಿಸುತ್ತಿದ್ದಾರೆ ಎಂದರು.

ಕಳೆದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸಂಸ್ಕೃತ ಭಾಷಾ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಮಾರು 230 ವಿದ್ಯಾರ್ಥಿ ಗಳಿಗೆ ಪುರಸ್ಕಾರ ನೀಡಲಾಯಿತು.

Related posts

Leave a Comment