ಅಕ್ರಮ ಸಂಬಂಧಕ್ಕೆ ಅಡ್ಡಿ ಆಗುತ್ತಾನೆ ಎಂದು ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಲೆ ಮಾಡಿದ್ದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣದಲ್ಲಿ ನಡೆದಿತ್ತು.
ಇದೀಗ ಕೊಲೆಯಾದ ಒಂದು ವರ್ಷದ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
2023ರ ಫೆಬ್ರವರಿಯಲ್ಲಿ ಮಲೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಾಮಧೇಯ ಮೃತದೇಹ ನೀರಿನಲ್ಲಿ ಕೊಚ್ಚಿಕೊಂಡು ಬಂದಿತ್ತು. ಕಾಣೆಯಾದ ಇಲಿಯಾಸ್ ಅಹಮ್ಮದ್ ಎಂದು ಅನುಮಾನಗೊಂಡಿದ್ದ ಪೊಲೀಸರು, ಕೂಡಲೇ ಮೃತನ ಮಕ್ಕಳ ಹಾಗೂ ಮೃತದೇಹದ ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು. ನಂತರ ಪರೀಕ್ಷೆಯಲ್ಲಿ ಮೃತ ಇಲಿಯಾಸ್ ಅಹಮ್ಮದ್ ಎಂದು ದೃಢಪಟ್ಟಿತ್ತು.
ಘಟನೆ ಬಳಿಕ ಇಲಿಯಾಸ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಆತನ ಪೋಷಕರು, ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೂಡಲೇ ಆ್ಯಕ್ಟೀವ್ ಆದ ಪೋಲಿಸರು, ಇಲಿಯಾಸ್ ಪತ್ನಿ ಭಿಭಿ ಆಯೇಷಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಇದೊಂದು ಪೂರ್ವನಿಯೋಜಿತ ಕೊಲೆ ಎನ್ನುವುದು ಬಯಲಿಗೆ ಬಂದಿದ್ದು, ಆಕೆಯ ಪ್ರಿಯಕರ ಮಂಜುನಾಥ್ ಹಾಗೂ ಭಿಭಿ ಆಯೇಷಾ ಸೇರಿ ಇಲಿಯಾಸ್ನನ್ನು ಕೊಲೆ ಮಾಡಿರುವುದು ಖಚಿತವಾಗಿದೆ.
ಪತಿ ಇಲಿಯಾಸ್ಗೆ ನಿದ್ದೆ ಮಾತ್ರೆ ಹಾಕಿ ದೈಹಿಕ ಸಂಪರ್ಕ ನಡೆಸುತ್ತಿದ್ದ ಆಯೇಷಾ ಮತ್ತು ಮಂಜುನಾಥ್, ಇಲಿಯಾಸ್ನನ್ನು ಕೊಂದರೆ ಅಕ್ರಮ ಸಂಬಂಧಕ್ಕೆ ಅಡ್ಡಿ ಇರುವುದಿಲ್ಲ ಎಂದು ಪ್ಲ್ಯಾನ್ ಮಾಡಿದ್ದಾರೆ. ಉಪಾಯದಿಂದ ಇಲಿಯಾಸ್ನನ್ನು ಸಾಗರಪೇಟೆ ಬಳಿ ಡಾಬಾಗೆ ಪಾರ್ಟಿಗೆ ಕರೆದುಕೊಂಡು ಹೋಗಿದ್ದ ಮಂಜುನಾಥ್, ಮದ್ಯದಲ್ಲಿ ನಿದ್ರೆ ಮಾತ್ರೆ ಹಾಕಿ ಇಲಿಯಾಸ್ಗೆ ಕುಡಿಸಿದ್ದ. ಬಳಿಕ ಬಲವಂತವಾಗಿ ಚಾನಲ್‌ನಲ್ಲಿ ಈಜಾಡಲು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಇದೀಗ ಕೊಲೆ ಆರೋಪಿಗಳಾದ ಇಲಿಯಾಸ್ ಪತ್ನಿ ಆಯೇಷಾ, ಪ್ರಿಯಕರ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.