ರಾಜ್ಯದಲ್ಲಿ ಬೇಸಿಗೆ ಕಾಲದ ಆರ್ಭಟ ಜೋರಾಗಿದ್ದು, ಆರಂಭದಲ್ಲೇ ಬಿಸಿಲಿನ ನರ್ತನ ಜೋರಾಗಿದೆ. ಕರಾವಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ.
ರಾಜ್ಯ ಹವಾಮಾನ ಇಲಾಖೆಯು ಇಂದು ಮತ್ತು ನಾಳೆ ಕರಾವಳಿಗೆ ಹೀಟ್ ವೇ ವಾರ್ನಿಂಗ್ ನೀಡಿದೆ. ಕಳೆದ ಒಂದು ವಾರದಿಂದ ರಾಜ್ಯದ ಕರಾವಳಿಯಲ್ಲಿ ದಾಖಲೆ ಪ್ರಮಾಣದಲ್ಲಿ ಗರಿಷ್ಠ ತಾಪಮಾನ ಇದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ನಾಲ್ಕೈದು ಡಿಗ್ರಿ ಗರಿಷ್ಠ ತಾಪಮಾನ ಏರಿಕೆ ಆಗಿದೆ. ಗರಿಷ್ಠ ತಾಪಮಾನ ಹೊನ್ನಾವರ, ಕಾರವಾರ, ಪಣಂಬೂರಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಳವಾಗಿದೆ.
ಕಾರಾವಾರ – 38.2 ಡಿಗ್ರಿ ಸೆಲ್ಸಿಯಸ್, ಹೊನ್ನಾವರ -36.6 ಡಿಗ್ರಿ ಸೆಲ್ಸಿಯಸ್, ಮಂಗಳೂರು -36.3 ಡಿಗ್ರಿ ಸೆಲ್ಸಿಯಸ್, ಪಣಂಬೂರು – 36.7 ಡಿಗ್ರಿ ಸೆಲ್ಸಿಯಸ್
ಕರ್ನಾಟಕದಾದ್ಯಂತ ಒಣಹವೆ ಮುಂದುವರೆದಿದೆ. ಬೆಳಗಾವಿ ಏರ್ಪೋರ್ಟ್ನಲ್ಲಿ 15.2 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶ ಇರಲಿದೆ ಎಂದು ಹವಾಮಾನ ಉಲಾಖೆ ತಿಳಿಸಿದೆ.
