ಮಂಗಳೂರು : ಸರಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 2.66 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಗೆ ನಮ್ರತಾ ಎಂಬಾಕೆಯ ಪರಿಚಯವಾಗಿದ್ದು, ಆಕೆ ಟೆಂಡರ್‌ದಾರ ಅವಿನಾಶ್ ಶೆಟ್ಟಿಗೆ 2.50 ಲಕ್ಷ ರೂ. ನೀಡಿದರೆ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿದ್ದಳು. ಅದರಂತೆ ತಾನು ಅವಿನಾಶ್ ಶೆಟ್ಟಿಗೆ ಕರೆ ಮಾಡಿ ಆತನ ಸೂಚನೆಯಂತೆ ತನ್ನ ಮಗಳಿಗೆ ಉದ್ಯೋಗ ದೊರಕಿಸಿಕೊಡಲು ವಿನಂತಿಸಿದೆ. ಹಾಗೇ ಚೆಕ್ ಕೂಡ ನೀಡಿದೆ.ಬಳಿಕ ಆತನನ್ನು ವಿಚಾರಿಸಿದಾಗ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದಿದ್ದ. ಬಳಿಕ ಇದೊಂದು ವಂಚನೆಯ ಜಾಲ ಎಂದು ಮನವರಿಕೆಯಾಯಿತು.
ಈತ ಹಲವು ಮಂದಿಗೆ ಉದ್ಯೋಗ ದೊರಕಿಸಿಕೊಡುವುದಾಗಿ ಹೇಳಿ ಬಳಿಕ ವಂಚಿಸಿದ್ದ ಆರೋಪದಡಿ ಜ.5ರಂದು ಉರ್ವ ಠಾಣೆ ಪೊಲೀಸರು ಬಂಧಿಸಿರುವ ವಿಚಾರ ತಿಳಿದು ಬಂತು. ಈ ಮಧ್ಯೆ ತಾನು ನೀಡಿದ ಚೆಕ್ ಅಕ್ಷತಾ ಎಂಬಾಕೆಯ ಖಾತೆ ಯಲ್ಲಿ ಕ್ಲಿಯರ್ ಆಗಿದೆ. ಅದಲ್ಲದೆ ಇನ್ನಷ್ಟು ಮೊತ್ತವನ್ನು ಗೂಗಲ್ ಪೇ ಮೂಲಕ ಗೌತಮ್ ಶೆಟ್ಟಿಗೆ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ಅವಿನಾಶ್ ಶೆಟ್ಟಿ, ನಮ್ರತಾ, ಅಕ್ಷತಾ ಹಾಗೂ ಗೌತಮ್ ಶೆಟ್ಟಿ ಎಂಬವರ ವಿರುದ್ಧ ಕ್ರಮ ಜರಗಿಸಬೇಕು ಎಂದು ಹಣ ಕಳಕೊಂಡವರು ದೂರಿನಲ್ಲಿ ತಿಳಿಸಿದ್ದಾರೆ.
