ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ಮೊದಲು ಭುಗಿಲೆದ್ದ ವಕ್ಫ್ ಜಾಗ ವಿವಾದ ಈಗ ಎಲ್ಲಾ ಜಿಲ್ಲೆಗಳಿಗೂ ಹರಡುತ್ತಿದೆ. ವಕ್ಫ್ ಆಸ್ತಿ ಕಾಯಿದೆಗೆ ಎನ್‌ಡಿಎ ಸರಕಾರ ತಿದ್ದುಪಡಿ ತರುವ ಮೊದಲೇ ಕರ್ನಾಟಕದಲ್ಲಿನ ವಕ್ಫ್ ಆಸ್ತಿಯೆಲ್ಲವನ್ನೂ ವಕ್ಫ್ ಬೋರ್ಡ್ ಕಬ್ಜಾಗೆ ತೆಗೆದುಕೊಳ್ಳಬೇಕೆಂಬ ಉದ್ದೇಶದಿಂದ ರೈತರಿಗೆ ನೋಟಿಸ್ ಗಳನ್ನು ನೀಡಲಾಗಿದೆ.
ಹೀಗೆ ನೋಟಿಸ್ ಕೊಡಿಸುವಂತೆ ಮಾಡಿ ಮಂಗಳಾರತಿ ಮಾಡಿಸಿಕೊಂಡ ವಕ್ಫ್ ಮಂತ್ರಿ ಜಮೀರ್ ಅಹ್ಮದ್ ಖಾನ್ ನಡೆ ಹಾಗೂ ಸಿದ್ದರಾಮಯ್ಯ ಸರ್ಕಾರದ ವಿವಾದದ ನಡೆ ಚರ್ಚೆಯಲ್ಲಿರುವಾಗಲೇ, ಈಗ ಮತ್ತೊಂದು ಕಾಂಟ್ರೋವರ್ಸಿ ಮುನ್ನಲೆಗೆ ಬಂದಿದೆ. ಮೀಸಲು ಅರಣ್ಯ ಹಾಗೂ ಕಂದಾಯ ಭೂಮಿಯನ್ನು ಪಡೆದು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿರುವ ವಕ್ಫ್ ಬೋರ್ಡ್ನ ನಡೆ ಹೊಸ ವಿವಾದ ಹುಟ್ಟುಹಾಕಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಇಸಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಮಲೆನಾಡಿನ ಅಮೂಲ್ಯ ದಟ್ಟ ಅರಣ್ಯಕ್ಕೆ ಸೇರಿದ ಪ್ರದೇಶವನ್ನು ವಕ್ಫ್ ಬೋರ್ಡ್ ವಶ ಮಾಡಿಕೊಂಡಿರುವ ಘಟನೆಯೇ ಈ ವಿವಾದಕ್ಕೆ ಮೂಲ ಕಾರಣ.
ಶಿರಸಿ -ಹಾವೇರಿ ರಾಷ್ಟ್ರೀಯ ಹೆದ್ದಾರಿಯ ಒಂದು ಪಕ್ಕದಲ್ಲಿ ಸರ್ಕಾರಿ ಕಂದಾಯ ಭೂಮಿ ಸರ್ವೆ ನಂಬರ್ ೧೨ರಲ್ಲಿ ಸುಮಾರು ಐದು ಎಕರೆ ಪ್ರದೇಶವನ್ನು ಅದು ಮೊದಲು ತನ್ನದಾಗಿಸಿಕೊಂಡಿತ್ತು. ಸ್ಥಳೀಯ ಗ್ರಾಮ ಪಂಚಾಯತಿ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಸ್ಥಳೀಯ ಜನರಿಗೆ ಗೊತ್ತಿಲ್ಲದ ರೀತಿಯಲ್ಲಿ ಈ ಕೆಲಸ ನಡೆದಿದೆ.
ಶಿರಸಿ ತಾಲೂಕು ಕಚೇರಿಯ ಮೂಲಗಳ ಪ್ರಕಾರ, ವಕ್ಫ್ ಬೋರ್ಡ್ ತನಗೆ ಭೂಮಿ ನೀಡಬೇಕೆಂದು ಅರ್ಜಿ ಹಾಕಿಕೊಂಡಾಗ ಯಾರೂ ತಕರಾರು ಮಾಡಿಲ್ಲ. ಹಾಗಾಗಿ ಅವರಿಗೆ ಆ ಭೂಮಿ ನೀಡಲಾಯಿತು. ಇದು ಒಂದು ಸ್ಯಾಂಪಲ್. ಇದೇ ರೀತಿ ಶಿರಸಿ ತಾಲೂಕಿನ ಬೇರೆಡೆ ಅಥವಾ ಉತ್ತರ ಕನ್ನಡ ಜಿಲ್ಲೆಯ ಬೇರೆಡೆ ಇದೇ ರೀತಿ ನಡೆದಿದೆಯೇ ಎಂಬ ವಿವರ ನೀಡಲು, ಹೆಸರು ಬಹಿರಂಗಪಡಿಸಿಲು ಇಚ್ಛಿಸದ ಅಧಿಕಾರಿ ಹಿಂಜರಿದಿದ್ದಾರೆ. ಇದರ ಅರ್ಥ ಏನೆಂದರೆ, ಮುಸ್ಲಿಂ ಸಮುದಾಯದ ಜನ ನೀಡುವ ದಾನ ಮಾತ್ರ ಅಲ್ಲ, ವಕ್ಫ್ ಬೋರ್ಡ್ ಖುದ್ದಾಗಿ ಸರಕಾರಕ್ಕೆ ಅರ್ಜಿ ಹಾಕಿ ಭೂಮಿ ತೆಗೆದುಕೊಳ್ಳಬಹುದು ಎಂದಾಗಿದೆ.
ಸಳೂರಿನಲ್ಲಿ ಹಾದು ಹೋಗುವ ಹೆದ್ದಾರಿಯ ರಸ್ತೆಯ ಇನ್ನೊಂದು ಪಕ್ಕ ವ್ಯಾಪಕವಾಗಿ ಹಬ್ಬಿಕೊಂಡಿರುವ ಮಲೆನಾಡಿನ ದಟ್ಟ ಅರಣ್ಯ ಪ್ರದೇಶದಲ್ಲಿ (ಸರ್ವೆ ನಂಬರ್ ೪೦ರಲ್ಲಿ) ಸಹ ೫೦ ಎಕರೆಗೂ ಮಿಕ್ಕಿದ ದಟ್ಟ ಅರಣ್ಯವನ್ನು ವಕ್ಫ್ ತನ್ನದಾಗಿಸಿಕೊಂಡಿರುವುದು ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿದೆ. ಸಮೀಪದಲ್ಲಿ ಯಾವುದೇ ಮುಸ್ಲಿಂ ಕುಟುಂಬಗಳು ಇಲ್ಲದೇ ಹೋದರು ಸಹ, ಇಷ್ಟೊಂದು ಅಗಾಧ ಭೂಮಿಯನ್ನು, ಅದರಲ್ಲೂ ದಟ್ಟ ಅರಣ್ಯ ಪ್ರದೇಶವನ್ನು ಹೇಗೆ ನೀಡಲಾಯಿತು ಎಂಬುದನ್ನು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಇಲ್ಲಿ ಬೃಹತ್ ಕಾಂಪೌAಡ್ ಗೋಡೆ ಕಟ್ಟಿ, ಗೇಟ್ ಅಳವಡಿಸಿ, ಬೃಹತ್ ನಾಮಫಲಕ ಹಾಕಿ, ಹಲವು ಮರಗಳನ್ನು ಕೂಡ ಕಡಿಯಲಾಗಿದೆ.
ಸರ್ವೊಚ್ಛ ನ್ಯಾಯಾಲಯ ಸಾಂವಿಧಾನಿಕ ಪೀಠದ ತೀರ್ಪಿನಲ್ಲಿ ಹೇಳಿರುವ ಅಂಶವನ್ನು ಗಮನಿಸಬೇಕು. ‘Once a forest, always a forest’’ ಎನ್ನುವ ತತ್ವದ ಆಧಾರದ ಮೇಲೆ ಅರಣ್ಯ ಭೂಮಿಯನ್ನು ಬೇರೆ ಯಾವ ಉದ್ದೇಶಕ್ಕೂ ಕೊಡಬಾರದು ಎನ್ನುವ ಕಾನೂನು ಇದ್ದಾಗಲೂ ಸರಕಾರ ಈ ಭೂಮಿಯನ್ನು ಹೇಗೆ ಮತ್ತು ಏಕೆ ನೀಡಿತು ಎಂದು ಪ್ರಶ್ನಿಸಿದಾಗ, ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ವಿವರ ನೀಡಲು ಹಿಂಜರಿದಿದ್ದಾರೆ.
ಇದೇ ರೀತಿ, ಜನವಸತಿ ಇಲ್ಲದ ಕಡೆ ಇರುವ ಖಾಲಿ ಕಂದಾಯ ಭೂಮಿಯನ್ನು, ಹುಲ್ಲುಗಾವಲಿಗೆ ಮೀಸಲಿಟ್ಟ ಭೂಮಿ, ಕಾದಿಟ್ಟ ಅರಣ್ಯದ ಭಾಗವನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿದರೆ ಹೇಗೆ ಏನು? ಎಂದು ಗ್ರಾಮಸ್ಥರು ಎಂದು ಭಯಬೀತರಾಗಿದ್ದಾರೆ.