ತಂತಿ ಬೇಲಿಗೆ ಹರಿಸಲಾಗಿದ್ದ ವಿದ್ಯುತ್ ಸ್ಪರ್ಶಿಸಿ ಮೂರು ವರ್ಷದ ಗಂಡಾನೆ ಸಾವನ್ನಪ್ಪಿದ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಕಾಡಂಚಿನ ಜಕ್ಕಳ್ಳಿ ಗ್ರಾಮದ ಜಮೀನೊಂದರಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
ಜಕ್ಕಳ್ಳಿ ಗ್ರಾಮದ ಹುಲಿಯಮ್ಮನ ಗುಡಿಗೆ ಹೋಗುವ ದಾರಿಯಲ್ಲಿ ಷರೀಫ್ ಖಾನ್ ಎಂಬವರಿಗೆ ಸೇರಿದ ಜಮೀನಿನ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಕಾಡಿನಿಂದ ಮೇವು ಅರಸಿ ಬಂದ ಆನೆ ಮರಿಗೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದೆ.
ಜಮೀನು ಮಾಲೀಕರು ಹಾಗೂ ಜಮೀನು ಗುತ್ತಿಗೆ ಪಡೆದಿದ್ದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.