ಮಂಗಳೂರು: ಡಿಸಿಪಿ ನೀಡಿದ್ದ ಎಚ್ಚರಿಕೆ ಮೀರಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಸಿಪಿಐ ಹಾಗೂ ಸಿಪಿಎಂ ಪಕ್ಷದ ಮುಖಂಡರ ವಿರುದ್ಧ ನಗರದ ದಕ್ಷಿಣ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ಯಾಲೆಸ್ಟೀನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಉಗ್ರರು ಸಾವನ್ನಪ್ಪಿದ್ದು, ಇದನ್ನು ಖಂಡಿಸಿ, ಕದನ ವಿರಾಮಕ್ಕೆ ಒತ್ತಾಯಿಸಿಮಿನಿ ವಿಧಾನಸೌಧದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು.
‘ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಿಪಿಎಂ ಮತ್ತು ಸಿಪಿಐ ಮುಖಂಡರು ಅಕ್ರಮಕೂಟ ಕಟ್ಟಿಕೊಂಡು, ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಈ ಕೃತ್ಯ ವೆಸಗಿದ ಇಮ್ತಿಯಾಜ್, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ನಾಗೇಶ್ ಕೋಟ್ಯಾನ್, ವಸಂತ ಆಚಾರಿ, ಯಾದವ ಶೆಟ್ಟಿ, ಸಂತೋಷ್ ಬಜಾಲ್, ಸುಕುಮಾರ್ ರಾವ್, ಯೋಗೀಶ್ ಜಪ್ಪಿನಮೊಗರು, ಹಯವದನ ರಾವ್, ಸೀತಾರಾಮ ಬೇರಿಂಜ ಮತ್ತು ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನಗರ ದಕ್ಷಿಣ ಠಾಣೆಯ ಎಎಸ್‌ಐ ಪ್ರವೀಣ್ ಕೆ. ದೂರು ನೀಡಿದ್ದರು.
ಅಕ್ರಮ ಕೂಟ ರಚಿಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 189 (2) ಹಾಗೂ ಸೆಕ್ಷನ್ 190ರ ಅಡಿ ಎಫ್‌ಐಆರ್ ದಾಖಲಾಗಿದೆ.
ಪ್ರತಿಭಟನೆ ನಡೆಸಲು ಹಾಗೂ ಧ್ವನಿ ವರ್ಧಕ ಬಳಸಲು ಅನುಮತಿ ನೀಡಬೇಕು ಎಂದು ನಾಗೇಶ್ ಕೋಟ್ಯಾನ್ ಅವರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದ್ದರು. ಆದರೆ, ಪೊಲೀಸ್ ಆಯುಕ್ತರ ಕಚೇರಿಯು ಅನುಮತಿ ನಿರಾಕರಿಸಿತ್ತು. ಈ ಕುರಿತು ಹಿಂಬರಹ ನೀಡಿದ್ದ ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ದಾರ್ಥ ಗೋಯಲ್, ‘ಅನುಮತಿ ನಿರಾಕರಿಸಿದ ಹೊರತಾಗಿಯೂ ಪ್ರತಿಭಟನೆ ನಡೆಸಲು ಮುಂದಾದರೆ ಇಲಾಖೆ ವತಿಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದರು.
ಅನುಮತಿ ನಿರಾಕರಿಸಿದ್ದನ್ನು ಲೆಕ್ಕಿಸದೇ, ಸಿಪಿಎಂ ಹಾಗೂ ಸಿಪಿಐ ಕಾರ್ಯಕರ್ತರು ಧ್ವನಿವರ್ಧಕ ಬಳಸದೆಯೇ ಮಿನಿ ವಿಧಾನಸೌಧದ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದ್ದರು.