ದೆಹಲಿಯ ಶ್ರದ್ಧಾ ಕೊಲೆಯ ಮಾದರಿಯಲ್ಲೇ ಬೆಂಗಳೂರಿನಲ್ಲಿ ಮಹಾಲಕ್ಷ್ಮೀ ಎಂಬ ಮಹಿಳೆಯ ಬರ್ಬರ ಹತ್ಯೆ ನಡೆದಿದೆ. ಮಹಿಳೆಯನ್ನ ಕೊಂದಿರೋ ಹಂತಕ 50ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ನಲ್ಲಿ ಮಾಂಸದ ಮುದ್ದೆಯನ್ನ ಇಟ್ಟು ಎಸ್ಕೇಪ್ ಆಗಿದ್ದಾನೆ. ಇದೀಗ ಕೊಲೆಗೈದಿರೋ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
FSL ತಜ್ಞರಿಗೆ ತಲೆನೋವಾದ ಕೊಲೆ, ಪತ್ತೆಯಾಗದ ರಕ್ತದ ಕಲೆ!
ಮಹಾಲಕ್ಷ್ಮೀ ಕೊಲೆ ಪ್ರಕರಣ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರಿಗೆ ತಲೆ ನೋವಾಗಿ ಪರಿಣಮಿಸಿದೆ. ಕೊಲೆಯಾದ ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೂ ಎಫ್ಎಸ್ಎಲ್ ತಜ್ಞರಿಗೆ ರಕ್ತದ ಕಲೆಗಳು ಮತ್ತು ದೇಹ ಕತ್ತರಿಸಿದ ಸ್ಥಳದ ಗುರುತುಗಳು ಪತ್ತೆಯಾಗಿಲ್ಲ. ಕೊಲೆ ಆರೋಪಿ ಯಾವುದೇ ಗುರುತು ಸಿಗದಂತೆ ಮನೆಯನ್ನು ಸ್ವಚ್ಛ ಮಾಡಿ, ಪರಾರಿಯಾಗಿದ್ದಾನೆ.
v
ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಲುಮಿನಾಲ್ ಕೆಮಿಕಲ್ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಆರೋಪಿ ಯಾವುದೊ ಕೆಮಿಕಲ್ ಬಳಸಿ ಮನೆ ಸ್ವಚ್ಛ ಮಾಡಿರುವ ಶಂಕೆ ಪೊಲೀಸರಿಗೆ ಬಂದಿದೆ. ಇನ್ನು, ಆರೋಪಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು, ಪಕ್ಕಾ ಪ್ಲ್ಯಾನ್ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ಹೇಗೆ ನಾಶ ಮಾಡಬೇಕು ಎಂಬುವುದನ್ನೂ ಮುಂಚೆಯೇ ಅಧ್ಯಯನ ಮಾಡಿದ್ದಾನೆ ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ.
ಮಹಾಲಕ್ಷ್ಮೀ ಸಂಪರ್ಕದಲ್ಲಿದ್ದ ಆಶ್ರಫ್
ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನನ್ನು, ಕರೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಆಶ್ರಫ್, ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದೆ ಎಂದು ಹೇಳಿದ್ದಾನೆ. “ಮಹಾಲಕ್ಷ್ಮೀ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದರೆ ನಾನು ಕೊಲೆ ಮಾಡಿಲ್ಲ. ಆರು ತಿಂಗಳ ಹಿಂದೆ ಆಕೆ ಜೊತೆ ಸಂಪರ್ಕ ಇತ್ತು. ಈಗ ದೂರ ಆಗಿದ್ದೆ. ನಮ್ಮ ಇಬ್ಬರ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳವಾದ ಮೇಲೆ ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗು, ನನಗು ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾನೆ.
ಬಳಿಕ, ಪೊಲೀಸರು ಅಶ್ರಫ್ ಮೊಬೈಲ್ ಪರಿಶೀಲಿಸಿದಾಗ, ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರುವುದು ತಿಳಿದಿದೆ. ಸದ್ಯ ಪೊಲೀಸರು ಅಶ್ರಫ್ನನ್ನು ಬಿಟ್ಟು ಕಳಿಸಿದ್ದಾರೆ.
ಮಹಾಲಕ್ಷ್ಮೀಯ ಮೊಬೈಲ್ ಪತ್ತೆ
ಮಹಾಲಕ್ಷ್ಮೀ ಮನೆಯಲ್ಲೇ ಆಕೆಯ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.