ಕಳ್ಳರ ಗ್ಯಾಂಗ್ ಒಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಕದಿಯಲು ಹೋಗಿದ್ದಾಗ ಗ್ಯಾಂಗ್‌ನ ಸದಸ್ಯನೊಬ್ಬನಿಗೆ ವಿದ್ಯುತ್ ಶಾಕ್ ಹೊಡೆದಿದ್ದು, ಆತನನ್ನು ಗಂಗಾ ನದಿಗೆ ಎಸೆದು ಹೋದ ಘಟನೆ ಉತ್ತರ ಪ್ರದೇಶದ ಕಾನ್ಪುರದ ಕರ್ನಲ್ ಗಂಜ್‌ನಲ್ಲಿ ನಡೆದಿದೆ.
ಅ.26 ರಂದು ಸ್ಕ್ರ್ಯಾಪ್ ಡೀಲರ್ ಹಿಮಾಂಶು ಹಾಗೂ ಆತನ ಗ್ಯಾಂಗ್‌ನ ಶಾನ್ ಅಲಿ, ಅಸ್ಲಾಂ, ವಿಶಾಲ್ ಮತ್ತು ರವಿ ಎಂಬವರು ಕಾನ್ಪುರದ ಗುರುದೇವ್ ಪ್ಯಾಲೇಸ್ ಬಳಿ ಟ್ರಾನ್ಸ್‌ಫಾರ್ಮರ್‌ನ್ನು ಕದಿಯಲು ನಿರ್ಧರಿಸಿದ್ದರು. ದರೋಡೆ ವೇಳೆ ಹಿಮಾಂಶುಗೆ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದು ಗಂಭೀರ ಸ್ಥಿತಿ ತಲುಪಿದ್ದಾನೆ. ಇದರಿಂದ ಗಾಬರಿಗೊಂಡ ಇತರ ನಾಲ್ವರು ಕಳ್ಳರು ಆತನ ಕಾಲು ಮತ್ತು ಕೈಗಳನ್ನು ಕಟ್ಟಿ, ಜೀವಂತವಾಗಿರುವಾಗಲೇ ಶುಕ್ಲಗಂಜ್ ಸೇತುವೆಯಿಂದ ಗಂಗಾ ನದಿಗೆ ಎಸೆದಿದ್ದಾರೆ.
ಹಿಮಾಂಶು ಮನೆಗೆ ಹಿಂತಿರುಗದಿದ್ದಾಗ, ಅವನ ತಾಯಿ ಮಂಜು ದೇವಿ ಅ.31 ರಂದು ಗ್ವಾಲ್ಟೋಲಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ದೂರಿನ ಅನ್ವಯ ಶಾನ್ ಅಲಿ, ಅಸ್ಲಾಂ ಮತ್ತು ವಿಶಾಲ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿತ್ತು.
ವಿಚಾರಣೆ ವೇಳೆ ಆರೋಪಿಗಳು ದರೋಡೆಗೆ ಯತ್ನಿಸಿದ ಹಿಮಾಂಶುವಿಗೆ ವಿದ್ಯುತ್ ಶಾಕ್ ತಗುಲಿದ್ದು, ಆತನನ್ನು ಗಂಗಾ ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಹೇಳಿಕೆಗಳನ್ನು ಖಚಿತಪಡಿಸಲು, ಪೊಲೀಸರು ಟ್ರಾನ್ಸ್‌ಫಾರ್ಮರ್ ಕಳ್ಳತನದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಿಮಾಂಶುನನ್ನು ಆಟೋಗೆ ಹಾಕುತ್ತಿರುವುದು ಸಿಸಿ ಟಿವಿಯಲ್ಲಿ ದಾಖಲಾಗಿರುವುದು ಕಂಡುಬಂದಿದೆ. ಹಿಮಾಂಶು ಈ ಹಿಂದೆ ಟ್ರಾನ್ಸ್‌ಫಾರ್ಮರ್ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜೈಲಿಗೆ ಕಳುಹಿಸಲಾಗಿದೆ.
A transformer robbery in Uttar Pradesh’s Kanpur took an unexpected turn when one of the thieves came in contact with a live wire and got injured. The man, still alive but in critical condition, was then thrown into the Ganga river by his four accomplices. The incident happened in Kanpur’s Colonelganj area.