ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾಸ್ಥ್ಯ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಗರ ಪ್ರದೇಶ ತನ್ನ ವ್ಯಾಪ್ತಿಯನ್ನು ಜಾಸ್ತಿ ಮಾಡುತ್ತಿದ್ದು, ದಕ್ಷಿಣ ಕನ್ನಡ, ಉಡುಪಿಯ ಪ್ರಮುಖ ನಗರಗಳ ಮಂದಿ ಮಾದಕ ದ್ರವ್ಯದ ನಶೆಯಲ್ಲಿ ತೇಲಾಡುವುದು ಹೆಚ್ಚಾಗುತ್ತಿದೆ. ಹಿಂದೊಮ್ಮೆ ಸಭ್ಯಸ್ಥರ ನಾಡೆಂದೇ ಖ್ಯಾತಿ ಹೊಂದಿದ್ದ ಕರಾವಳಿಯಲ್ಲಿ ಈಗ ಯುವ ಜನರು ದಾರಿ ತಪ್ಪುತ್ತಿದ್ದಾರೆ.
ಎತ್ತ ಸಾಗುತ್ತಿದೆ ಬುದ್ಧಿವಂತ ಜಿಲ್ಲೆ..?
ಕರಾವಳಿ ಅಂದರೆ ಶಿಕ್ಷಣಕ್ಕೆ ಹೆಸರುವಾಸಿ. ಇಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಅತ್ಯುತ್ತಮ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿ. ಹೀಗಾಗಿ ರಾಜ್ಯ, ಅನ್ಯರಾಜ್ಯದ ವಿದ್ಯಾರ್ಥಿಗಳು ಉಡುಪಿ. ಮಣಿಪಾಲ, ಮಂಗಳೂರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ವರ್ಷಂಪ್ರತಿ ಸಹಸ್ರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಇನ್ನು ಡ್ರಗ್ಸ್, ಗಾಂಜಾ, ಮದ್ಯಪಾನ ಹೀಗೆ ಹಲವು ಕೆಟ್ಟ ಚಟಗಳು ಯುವಕರ ಜೀವನವನ್ನು ಬಲಿಪಡೆಯುತ್ತಿದೆ. ಆ ಮೂಲಕ ನಗರದ ಸ್ವಾಸ್ಥ್ಯ ಹಾಳಾಗುತ್ತಿದೆ. ಇಂದು ಬುದ್ಧಿವಂತರ ಜಿಲ್ಲೆಯಲ್ಲಿ ಯುವಕರು ಹಾಳಾಗುತ್ತಿದ್ದು ಮುಂದೆ ಯಾವ ಮಟ್ಟಕ್ಕೆ ಪರಿಣಾಮ ಬೀರುತ್ತೆ ಅನ್ನುವುದು ದೊಡ್ಡ ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ನಶಾ ಲೋಕದಲ್ಲಿ ತೇಲಾಡುವುದು ರಾತ್ರಿ ಆದರೆ ಸಾಕು ನಗರಗಳಲ್ಲಿ ಕಾಣಸಿಗುವ ದೃಶ್ಯಗಳು. ಇದಕ್ಕೆ ಸರಿಯಾದ ಕ್ರಮ ಬೇಕಾಗಿದೆ.
ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಡ್ರಗ್ಸ್ ಹಾವಳಿ
ಹೌದು. ನಗರ ಪ್ರದೇಶ ಮಾತ್ರವಲ್ಲದೆ, ನಗರದ ಹೊರವಲಯದಲ್ಲೂ ಡ್ರಗ್ಸ್ ಹಾವಳಿ ಮಿತಿ ಮೀರುತ್ತಿದೆ. ಡ್ರಗ್ಸ್, ಮಾದಕ ದ್ರವ್ಯ ಸೇವಿಸುವ ಯುವಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಎಳೆ ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ಧ ಸಮರ ಸಾರುತ್ತಿದ್ದು ಕರಾವಳಿಗೆ ಎಗ್ಗಿಲ್ಲದೆ ಡ್ರಗ್ಸ್ ಪೂರೈಕೆ ಆಗುತ್ತಿದೆ. ವಿದೇಶಿಗರು, ಬೇರೆ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಹಣದಾಮಿಷ ತೋರಿಸಿ ಡ್ರಗ್ಸ್ ಪೂರೈಕೆ ಆಗುತ್ತಿದೆ. ಮಾದಕ ದ್ರವ್ಯ ಸೇವಿಸುವ ಮಂದಿಯೂ ಏರಿಕೆಯಾಗುತ್ತಿದೆ. 19, 20 ವರ್ಷದ ವಿದ್ಯಾರ್ಥಿಗಳ ಕೈಗೆ ಸಿಗುವ ಡ್ರಗ್ ಡೀಲರ್ ಗಳು ಪೊಲೀಸರ ಕೈಗೆ ಸಿಗೋದಿಲ್ಲ.!? ಎನ್ನುವುದು ನಿಜಕ್ಕೂ ಆಶ್ಚರ್ಯ ಪಡುವಂತ ವಿಷಯವೇ ಸರಿ.
ರಾತ್ರಿ ಇಡೀ ಕಾರ್ಯನಿರ್ವಹಿಸುವ ಪಬ್, ಬಾರ್ & ರೆಸ್ಟೋರೆಂಟ್‌ಗಳು
ಇನ್ನು ನಗರದಲ್ಲಿ ರಾತ್ರಿಇಡೀ ಪಬ್, ಬಾರ್‌ಗಳು ಕಾರ್ಯಚರಿಸುತ್ತಿದೆ. ಇದೂ ಸಹ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ರಾತ್ರಿ ಹೊತ್ತಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಸಾಕಷ್ಟು ವರದಿಗಳು ಪ್ರಕಟಗೊಂಡರೂ, ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ, ಕಾಣದ ಕೈಗಳ ಆಟದಿಂದ ಇದಕ್ಕೆ ಬ್ರೇಕ್ ಬೀಳುತ್ತಿಲ್ಲ.
ಹೆಣ್ಣು ಮಕ್ಕಳಿಗೂ ಅಂಟಿದ ನಶೆಯ ಚಟ
ಹೆಣ್ಣು ಮಕ್ಕಳು ಸಹ ಇಂದು ನಶೆ ಪದಾರ್ಥ ಸೇವಿಸುತ್ತಿದ್ದು ಆತಂಕ ಉಂಟುಮಾಡಿದೆ. ಕಾಲೇಜು ವಿದ್ಯಾರ್ಥಿನಿಯರು ಡ್ರಗ್ಸ್ ವ್ಯಾಮೋಹಕ್ಕೆ ಬಲಿಯಗುತ್ತಿದ್ದಾರೆ. ಆ ಮೂಲಕ ತಮ್ಮ ಭವಿಷ್ಯವನ್ನು ತಾವೇ ಹಾಳು ಮಾಡುತ್ತಿದ್ದಾರೆ.
ಡ್ರಗ್ಸ್ ವಿರುದ್ಧ ಹೋರಾಟ ಯಾಕಿಲ್ಲ.?
ಕರಾವಳಿಯಲ್ಲಿ ಹಲವು ಸಂಘಟನೆಗಳು ಇದ್ದು ಇದರ ವಿರುದ್ಧವಾಗಿ ಯಾವುದೇ ಸಂಘಟನೆಗಳು ಪ್ರತಿಭಟನೆ ಮಾಡುತ್ತಿಲ್ಲ ಎಂಬುವುದು ನಿಜಕ್ಕೂ ಬೇಸರ ತರಿಸಿದೆ. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ರಾಜಕೀಯ ನಾಯಕರುಗಳು, ವಿವಿಧ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗಳು ಒಗ್ಗಟ್ಟಾಗಿ ನಿಂತು ಪ್ರತಿಭಟನೆ ಮಾಡಬೇಕಾಗಿದೆ. ಎಲ್ಲರೂ ಒಗ್ಗಟ್ಟಾಗಿ ಕರಾವಳಿಯ ಸ್ವಾಸ್ಥ್ಯ ಕಾಪಡಲು ಪ್ರತಿಭಟನೆ ಮಾಡಬೇಕಾಗಿದೆ. ಈಗಾಗಲೇ ಆಂಟಿ ಡ್ರಗ್ಸ್ ಸ್ಕ್ವಾಡ್ ಕಾರ್ಯಚರಣೆ ಮಾಡುತ್ತಿದೆ. ಇದಕ್ಕೂ ಬಲ ಸಿಗಬೇಕಾಗಿದೆ. ವಿದ್ಯಾರ್ಥಿ ಸಂಘಟನೆಗಳು ಇಂತಹ ಮಾದಕ ಲೋಕದ ವಿರುದ್ಧ ಪ್ರತಿಭಟನೆ ನಡೆಸಬೇಕು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವಂತ ಕಾರ್ಯ ಮಾಡಬೇಕು. ರಾಜಕೀಯ ನಾಯಕರುಗಳು ಇದರ ವಿರುದ್ಧ ಕ್ರಮಕ್ಕೆ ಒತ್ತಾಯಿಸುವ ಅಗತ್ಯತೆ ಇದೆ.
ಪೋಷಕರೇ ನಿಮ್ಮ ಮಕ್ಕಳ ಬಗ್ಗೆ ಗಮನಹರಿಸಿ
ಹೌದು, ಪೋಷಕರು ತಮ್ಮ ಮಕ್ಕಳ ಬಗ್ಗೆ ಸಾಕಷ್ಟು ಗಮನ ಹರಿಸಬೇಕು. ಇಂದಿನ ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕಾರಯುತ ಜೀವನ ಪಾಠ ಹೇಳಿಕೊಡಬೇಕಾಗಿದೆ. ತಂದೆ ತಾಯಿ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಆದಲ್ಲಿ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ.
