Mangalore and Udupi news
ಉಡುಪಿಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಮಾಲ್’ಗಳಲ್ಲಿ ಬಡ ಮಕ್ಕಳ ಕಲರವ, ಸಂಭ್ರಮ.!! ಅಭಿನವ ಭಾರತ ನಡೆಸಿದ ಅದ್ಭುತ ಕಾರ್ಯ

ಮಕ್ಕಳ ಮೊಗದಲ್ಲಿ ಮಂದಹಾಸ, ಚಿಕ್ಕ ಚಿಕ್ಕ ಜೋಪಡಿಗಳ ಮುಂದೆ ಹಣತೆಗಳ ಸಾಲು. ಕೈಯಲ್ಲಿ ನಕ್ಷತ್ರ ಕಡ್ಡಿ, ಸ್ಟಾರ್ ಹೋಟೆಲ್‌ನಲ್ಲಿ ಬಡ ಮಕ್ಕಳ ಕಲರವ. ಎಂದೂ ಕಂಡಿರದ ಆ ವಿಶೇಷ ಉತ್ಸಾಹ, ಹುಮ್ಮಸ್ಸು, ಬಡ ಮಕ್ಕಳಿಗೆ ಒಂದೊಳ್ಳೆ ಉಡುಪು, ಉಪಚಾರ.. ಈ ದೃಶ್ಯ ನಿಜಕ್ಕೂ ಕಣ್ಣಂಚನ್ನು ತೇವಗೊಳಿಸುವಂತೆ ಮಾಡಿತ್ತು. ದೀಪಗಳ ಹಬ್ಬವನ್ನು ಅಭಿನವ ಭಾರತ ಸೊಸೈಟಿ ತಂಡ ಆಚರಿಸಿಕೊಂಡ ರೀತಿಯಿದು.

ದೀಪಗಳ ಹಬ್ಬ ದೀಪಾವಳಿಯನ್ನು ಪ್ರತಿಯೊಬ್ಬರು ವಿಶೇಷವಾಗಿ ಆಚರಿಸೋದಕ್ಕೆ ಬಯಸುತ್ತಾರೆ. ವಿವಿಧ ಸಂಘ ಸಂಸ್ಥೆಗಳು ವಿವಿಧ ರೀತಿಯಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ರಾಷ್ರ್ಟ ಭಕ್ತಿ, ಸಾಮಾಜಿಕ ಕಳಕಳಿ ಹಾಗೂ ಹಿಂದೂ ಸಮಾಜದ ಜಾಗೃತಿಗಾಗಿ ಹುಟ್ಟಿಕೊಂಡ ಸಮಾನ ಮನಸ್ಕರ ತಂಡ ಅಭಿನವ ಭಾರತ ಸೊಸೈಟಿ, ಬೆಳಕಿನ ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. ಬಡ ಮಕ್ಕಳೊಂದಿಗೆ ದೀಪಾವಳಿಯನ್ನು ಸಂಭ್ರಮಿಸಿದ್ದಾರೆ.

ಹಲವು ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿರುವ ಅಭಿನವ ಭಾರತ ಸಂಘಟನೆ ದೀಪಾವಳಿಯಂದು ಬಡ ಕೂಲಿ ಕಾರ್ಮಿಕರ ಮಕ್ಕಳ ಜೊತೆಗೆ ಅರ್ಥಪೂರ್ಣ ಹಾಗೂ ಎಲ್ಲರಿಗೂ ಮಾದರಿಯಾಗುವಂತೆ ಹಬ್ಬ ಆಚರಿಸಿಕೊಂಡಿದ್ದಾರೆ.

ಈ ಹಿಂದೆ ಅಭಿನವ ಭಾರತ ತಂಡದ ಸದಸ್ಯರೊಬ್ಬರ ಬಳಿ ಬೀಡಿನ ಗುಡ್ಡೆಯ ಬಡ ಕೂಲಿ ಕಾರ್ಮಿಕರ ಹುಡುಗನೊಬ್ಬ “ನನಗೆ ದೊಡ್ಡವನಾದ ಮೇಲೆ ಶಾಪಿಂಗ್ ಸೆಂಟರ್ ಒಳಗೆ ಹೋಗಬೇಕು ಅಂತ ಆಸೆ ಇದೆ” ಎಂದಿದ್ದ. ಅವರು ಈಗಲೇ ಹೋಗಬಹುದಲ್ವಾ ಎಂದಾಗ “ಅಲ್ಲೆಲ್ಲ ನಮ್ಮನ್ನು ಒಳಗೆ ಬಿಡಲ್ರೀ.. ಓಡಿಸ್ತಾರ” ಎಂದು ಜೋರಾಗಿ ನಕ್ಕು ತನ್ನ ಒಡಲಿನಲ್ಲಿ ಹುಟ್ಟಿದ ಅಪಮಾನದ ನೋವನ್ನು ನಗುವಿನ ಮೂಲಕ ಮರೆಮಾಚಿದ್ದ. ಥೇಟ್ ತಮಿಳಿನ ಕಾಕ ಮುತ್ತೈ ಚಿತ್ರದ ರೀತಿ. ನಮ್ಮ ಸುತ್ತಮುತ್ತಲೇ ಇರುವ, ನಮಗೆ ನಿತ್ಯವೂ ಕಾಣುವ, ನಮ್ಮೊಂದಿಗೆ ಎಲ್ಲರಂತೆ ಬೆರೆಯದ ಒಂದು ಸಮಾಜವಿದೆ ಎನ್ನುವುದನ್ನು ಅರಿತ ಅಭಿನವ ಭಾರತ ತಂಡ ಒಂದು ವಿನೂತನ ಮೇಲ್ಪಂಕ್ತಿ ಹಾಕಿದೆ.

ದೀಪಾವಳಿಯಂದು ಬಡ ಮಕ್ಕಳನ್ನು ಮಾಲ್ ಗಳಿಗೆ ಕರೆದುಕೊಂಡು ಹೋಗಿ ಅವರಿಗೆ ಹೊಸ ಬಟ್ಟೆ, ಊಟ, ಆಟ, ಸಂಭ್ರಮ ಹೀಗೆ ಹೊಸ ಪ್ರಪಂಚವನ್ನು ಅವರಿಗೆ ತೋರಿಸಿಕೊಟ್ಟಿದ್ದಾರೆ. ಇವರ ಈ ಕಾರ್ಯದಲ್ಲಿ ನಿತ್ಯವೂ ಬಡವರ ಕೇರಿಗಳಲ್ಲಿ ನಮ್ಮ ಕಣ್ಣಿಗೆ ರಾಚುವ ನೋವು, ಅಸಹಾಯಕತೆ, ಅಪಮಾನ ಮತ್ತು ಆಸೆ ತುಂಬಿದ ಕಂಗಳಿವೆ. ಆ ಪುಟ್ಟ ಹೃದಯಗಳು ಸಂಭ್ರಮಿಸಿದಾಗ ಹೊಮ್ಮುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಆ ಮೂಲಕ ಎಂದೂ ಕಂಡಿರದ ಹೊಸ ಲೋಕದಲ್ಲಿ ಮಕ್ಕಳು ಸಂಭ್ರಮಿಸಿದರು. ಯುವಕರ ತಂಡವು ಮಕ್ಕಳ ಮೊಗದಲ್ಲಿ ಸಂತಸ ಕಂಡು ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

Related posts

Leave a Comment