
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೇಲೆ ಪ್ರೀತಿಸಿ, ಮದುವೆ ಮಾಡಿಕೊಳ್ಳುವುದಾಗಿ ಯುವಕನೊಬ್ಬ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ಕೊಡಲು ಹೋದ ಯುವತಿಯನ್ನು ಪೊಲೀಸ್ ಕಾನ್ಸ್‌ಸ್ಟೇಬಲ್ ನ್ಯಾಯ ಕೊಡಿಸುವುದಾಗಿ ನಂಬಿಸಿ ಆತನೇ ಮತ್ತೆ ಎರಡು ಬಾರಿ ಅತ್ಯಾಚಾರ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ 17 ವರ್ಷದ ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ಪುಸಲಾಯಿಸಿದ ಯುವಕನೊಬ್ಬ ಬಾಲಕಿಯ ಮೇಲೆ ಕಳೆದ ನಾಲ್ಕೈದು ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಇದಾದ ನಂತರ ತಾನು ಪ್ರೀತಿಸಿದ ಯುವಕನಿಗೆ ಈಗಾಗಲೇ ಮದುವೆ ಆಗಿದ್ದು, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಯುವತಿ ಆತನ ಮೇಲೆ ಅತ್ಯಾಚಾರದ ದೂರು ದಾಖಲು ಮಾಡಲು ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಆದರೆ, ಬೊಮ್ಮನಹಳ್ಳಿ ಠಾಣೆಯ ಕಾನ್ಸ್‌ಸ್ಟೇಬಲ್ ತಾನು ನ್ಯಾಯ ಕೊಡಿಸುವುದಾಗಿ ಬಾಲಕಿಯನ್ನು ಪುಸಲಾಯಿಸಿ, ಕೆಲಸ ಕೊಡಿಸುವ ಭರವಸೆ ನೀಡಿದ್ದಾನೆ. ಇದಾದ ನಂತರ ವಿಚಾರಣೆಗೆ ಹೋಗೋದಿದೆ ಎಂದು ಒಯೋ ಲಾಡ್ಜ್‌ಗೆ ಕರೆದೊಯ್ದು, ಆಕೆ ಅಪ್ರಾಪ್ತೆ ಎಂಬುದನ್ನೂ ನೋಡದೇ, ತಾನೊಬ್ಬ ಸಮಾಜದ ರಕ್ಷಕ ಎಂಬುದನ್ನೂ ಅರಿತುಕೊಳ್ಳದೇ ನೀಚ ಕೃತ್ಯ ಎಸಗಿದ್ದಾನೆ.
ಬಾಲಕಿ ಈ ವಿಚಾರವನ್ನು ಪೋಷಕರಿಗೆ ಹೇಳುವುದಾಗಿ ತಿಳಿಸಿದಾಗ ನಿನ್ನೊಂದಿಗೆ ಖಾಸಗಿಯಾಗಿ ಕಳೆದ ಫೋಟೋ ಮತ್ತು ವಿಡಿಯೋಗಳು ನನ್ನ ಬಳಿ ಇದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ನಿನ್ನ ಮತ್ತು ನಿಮ್ಮ ಕುಟುಂಬದ ಮಾನ ಹರಾಜು ಹಾಕುವುದಾಗಿ ಪೊಲೀಸ್ ಕಾನ್ಸ್‌ಸ್ಟೇಬಲ್ ಬೆದರಿಕೆ ಹಾಕುತ್ತಾನೆ. ನಂತರ, ಪುನಃ ಅತ್ಯಾಚಾರ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಪುಸಲಾಯಿಸಿ ತನ್ನೊಂದಿಗೆ ಬರುವಂತೆ ಕರೆಯುತ್ತಾನೆ. ಮತ್ತೊಮ್ಮೆ ಒಯೋ ಲಾಡ್ಜ್‌ಗೆ ಕರೆದೊಯ್ದು, ಆಕೆಯ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡುತ್ತಾನೆ.
ಈ ಬಗ್ಗೆ ಯುವತಿ ತಾಯಿ ನೀಡಿದ ದೂರಿನ ಮೇರೆಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ಅತ್ಯಾಚಾರ ಆರೋಪಿಯಾದ ಪ್ರಿಯಕರ ವಿಕ್ಕಿ ಹಾಗೂ ನ್ಯಾಯ ಕೊಡಿಸುವುದಾಗಿ ಅತ್ಯಾಚಾರ ಮಾಡಿದ ಪೊಲೀಸ್ ಕಾನ್ಸ್‌ಸ್ಟೇಬಲ್ ಅರುಣ್ ಇಬ್ಬರನ್ನೂ ಬಂಧಿಸಲಾಗಿದೆ. ಬಾಲಕಿ ಮೈಕೋ ಲೇಔಟ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ಅತ್ಯಾಚಾರ ಮಾಡಿದ ಇಬ್ಬರ ವಿರುದ್ಧವೂ ಪೊಕ್ಸೊ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ. ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಿ ಆಗ್ರಹಾರ ಜೈಲಿಗಟ್ಟಲಾಗಿದೆ.