ಮೂಡುಬಿದಿರೆ: ಸಮಾಜ ಮಂದಿರದ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಮೇಲೆ ಗುರುವಾರ ಸಂಜೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ನಡೆದಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕರು ಪೆಟ್ರೋಲ್ ಹಾಕುತ್ತಿದ್ದ ಸಿಬ್ಬಂದಿ ಸುರೇಶ್, ಮೌನೇಶ್, ಪ್ರವೀಣ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ಹಲ್ಲೆಗೊಳಗಾದ ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಯುವಕರ ತಂಡವು ಸಿಬ್ಬಂದಿ ಸುರೇಶ್ ಎಂಬವರ ಬಳಿ ಮಾತನಾಡಿ ಹಲ್ಲೆ ನಡೆಸಿದ್ದು, ಈ ಸಂದರ್ಭ ಅಲ್ಲೇ ಇದ್ದವರು ಹಿಂತಿರುಗಿ ಹೊಡೆದಿದ್ದಾರೆ. ಗಾಯಗೊಂಡಿರುವ ಸಿಬ್ಬಂದಿಗಳು ಮತ್ತು ನಾಲ್ವರು ಯುವಕರು ಪರಿಚಿತರಾಗಿದ್ದು ಹಳೆ ದ್ವೇಷದಿಂದ ಹಲ್ಲೆ ನಡೆಸಿರಬಹುದೆಂದು ಶಂಕಿಸಲಾಗಿದೆ. ನಾಲ್ವರು ಯುವಕರಲ್ಲಿ ಶಿಶಿರ್ ಎಂಬಾತ ಮೊದಲು ಅದೇ ಪೆಟ್ರೋಲ್ ಬಂಕ್ ನಲ್ಲಿ ಕೆಲಸಕ್ಕೆ ಇದ್ದ ಎಂದು ತಿಳಿದು ಬಂದಿದೆ. ಶಿಸಿರ್ ಮತ್ತು ಆತನ ಗೆಳೆಯರು ಸೇರಿ ಈ ಹಲ್ಲೆ ನಡೆಸಿರುತ್ತಾರೆ.ಘಟನೆಯ ದೃಶ್ಯವು ಪೆಟ್ರೋಲ್ ಬಂಕ್ ನ ಸಿಸಿಟಿವಿ ಕ್ಯಾಮರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

