ಮಂಗಳೂರು: ಸಂದೀಪ್ ಪೂಜಾರಿ ವಿದ್ಯಾನಗರ ಪಂಜಿಮೊಗರು ಮಾಲೀಕತ್ವದ ಸನ್ನಿ ಕ್ರಿಕೆಟರ್ಸ್ ಪಂಜಿಮೊಗರು ತಂಡವು ಎಜುಕಾರುಣ್ಯ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ದಿವಂಗತ ಎ. ವಿಶ್ವನಾಥ ಭಂಡಾರಿ ಸ್ಮರಣಾರ್ಥ ಹಮ್ಮಿಕೊಂಡ ಎರಡನೇ ವರ್ಷದ ಕಾರುಣ್ಯ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದೆ.
ಭಾನುವಾರ ಬಂಗ್ರಕುಳೂರು ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ಆಹ್ವಾನಿತ 32 ತಂಡಗಳ ಕ್ರಿಕೆಟ್ ಟೂರ್ನಿಯಲ್ಲಿ ಸನ್ನಿ ಪಂಜಿಮೊಗರು ತಂಡವು ಸಂಗಮ್ ಯಂಗ್ ಬಾಯ್ಸ್ ಕೃಷ್ಣಾಪುರ ತಂಡವನ್ನು ಸೋಲಿಸಿತು. ಸಂಗಮ್ ಯಂಗ್ ಬಾಯ್ಸ್ ತಂಡ ಸತತ ಎರಡನೇ ಬಾರಿ ರನ್ನರ್ ಅಪ್ ಆಯಿತು. ಸೆಮಿಫೈನಲ್ ಪಂದ್ಯದಲ್ಲಿ ಸನ್ನಿ ತಂಡವು ಉದಯ ಅಬ್ಬೆಟ್ಟು ತಂಡವನ್ನು ಸೋಲಿಸಿದರೆ, ಸಂಗಮ್ ತಂಡ ಕೇಸರಿ ಫ್ರೆಂಡ್ಸ್ ಬಜ್ಪೆ ತಂಡವನ್ನು ಪರಾಭವಗೊಳಿಸಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ, ಸಮಾಜದಲ್ಲಿ ಕಷ್ಟ ಅನುಭವಿಸಿ, ಬಡತನದ ನೋವು ತಿಳಿದವರಿಗೆ ಇತರರ ಕಷ್ಟದ ಅರಿವಾಗುತ್ತದೆ. ಎಜುಕಾರುಣ್ಯ ಟ್ರಸ್ಟ್ ನ ಪದಾಧಿಕಾರಿಗಳು, ಟ್ರಸ್ಟಿಗಳು ಆ ಕಷ್ಟ ಅನುಭವಿಸಿ ಅದರ ಅರಿವು ಇದ್ದುದರಿಂದ ಇಂದು ಬಡವರಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ವಿವಿಧ ಶಾಲಾ ಕಾಲೇಜುಗಳ 30 ವಿದ್ಯಾರ್ಥಿಗಳಿಗೆ 7 ಲಕ್ಷ ರೂಪಾಯಿ ವ್ಯಯ ಮಾಡಿ ವಿದ್ಯೆ ಕಲಿಸುವ ಮೂಲಕ ಎಜುಕಾರುಣ್ಯದ ತಂಡ ಭವಿಷ್ಯದ ಪ್ರಜೆಗಳನ್ನು ನಿರ್ಮಿಸುವ ಕೆಲಸಕ್ಕೆ ಮುಂದಾಗಿದೆ. ಕೇವಲ ಶಿಕ್ಷಣಕ್ಕೆ ಮಾತ್ರವಲ್ಲದೆ, ಸಮಾಜದ ಬಡ ವರ್ಗದವರನ್ನು ಗುರುತಿಸಿ ಮನೆ ನಿರ್ಮಾಣ ಮಾಡುವ ಕೆಲಸವನ್ನು ಕೂಡ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಲೋಕೇಶ್ ಭಂಡಾರಿ ಮಾತನಾಡಿ, ಶೈಕ್ಷಣಿಕ ರಂಗದಲ್ಲಿ ಕೆಲಸ ಮಾಡುತ್ತಿರುವ ಎಜುಕಾರುಣ್ಯ ಟ್ರಸ್ಟ್ ಗೆ ನಮ್ಮ ಕಡೆಯಿಂದ ಸರ್ವ ರೀತಿಯ ನೆರವು ನೀಡಲಾಗುವುದು. ಇಲ್ಲಿರುವ ಎಲ್ಲರೂ ಈ ಸಂಸ್ಥೆಗೆ ಸಹಕಾರ ನೀಡಿದರೆ ಮುಂದೆ ಉತ್ತಮ ಕೆಲಸ ಮಾಡಲು ಅವರಿಗೆ ಸಹಕಾರವಾಗುತ್ತದೆ ಎಂದು ಹೇಳಿದರು.
ವಿ.ಜೆ ಮಧುರಾಜ್ ಗುರುಪುರ, ಕರಾವಳಿ ಕುರುಬರ ಸಂಘದ ಅಧ್ಯಕ್ಷ ನಿರಂಜನ್, ಶ್ರೀ ಸತ್ಯ ಕೋರ್ದಬ್ಬು ದೈವಸ್ಥಾನ ಸಮಿತಿಯ ಗೌರವಾಧ್ಯಕ್ಷ ವೀರಪ್ಪ ಎಸ್ ಪೂಜಾರಿ, ಸಾಮಾಜಿಕ ಕಾರ್ಯಕರ್ತರಾದ ಮೋಹನ್ ಪಚ್ಚನಾಡಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರೀಶ್ ಶೆಟ್ಟಿ ಶಿಲ್ಪಾ, ಉದ್ಯಮಿಗಳಾದ ರಮೇಶ್ ಕೋಟ್ಯಾನ್ ಕಾವೂರು, ಶ್ರೀನಿವಾಸ್ ಕೂಳೂರು, ಸಾಕ್ಷಾತ್ ಶೆಟ್ಟಿ ಕಾವೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಶಾಂತಿನಗರ ಇದರ ಕಾರ್ಯಾಧ್ಯಕ್ಷ ವಿನಯ್ ಕುಮಾರ್, ವಿದ್ಯಾನಗರ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಪೂಜಾರಿ, ಉದಯ ಯುವಕ ಮಂಡಲ ಅಬ್ಬೆಟ್ಟು ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ರಂಜಿತ್ ಶೆಟ್ಟಿ ಉರುಂದಾಡಿ ಕಾರ್ಯಕ್ರಮ ನಿರೂಪಿಸಿದರು. ಎಜುಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮೋಹನದಾಸ್ ಮರಕಡ ವಂದಿಸಿದರು.
ಪ್ರಶಸ್ತಿ ಮೊತ್ತದ ಒಂದು ಪಾಲು ಟ್ರಸ್ಟ್ ಗೆ
ಟೂರ್ನಿಯ ಚಾಂಪಿಯನ್ ಆಗಿ ಮೂಡಿಬಂದ ಸನ್ನಿ ಪಂಜಿಮೊಗರು ತಂಡದ ಮಾಲೀಕ ಸಂದೀಪ್ ಪೂಜಾರಿಯವರು ಪ್ರಶಸ್ತಿ ಮೊತ್ತದ ಒಂದು ಭಾಗವನ್ನು ಎಜುಕಾರುಣ್ಯ ಟ್ರಸ್ಟ್ ನ ವಿದ್ಯಾನಿಧಿಗೆ ಹಸ್ತಾಂತರಿಸಿದರು. ಸರಣಿಯುದ್ಧಕ್ಕೂ ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ಸನ್ನಿ ಕ್ರಿಕೆಟರ್ಸ್ ತಂಡದ ಧರ್ಮ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರೆ, ಸಂಗಮ್ ಕೃಷ್ಣಾಪುರ ತಂಡದ ಯಾರಿಷ್ ಬೆಸ್ಟ್ ಬೌಲರ್, ರಾಕೇಶ್ ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿ ಪಡೆದರು. ಸನ್ನಿ ತಂಡದ ಅಶ್ವಿತ್ ಪಂದ್ಯಶ್ರೇಷ್ಠ ಎನಿಸಿದರು.

