ಕುಂದಾಪುರ : ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನ ಕಿಟಕಿಯ ಗಾಜು ಒಡೆದು ಅದರೊಳಗೆ ಇದ್ದ ಲಕ್ಷಾಂತರ ರೂ. ನಗದು ಹಣ ದೋಚಿ ಪರಾರಿಯಾದ ಘಟನೆ ಮಂಗಳವಾರ ಸಂಜೆ ತಲ್ಲೂರು ಎಂಬಲ್ಲಿ ನಡೆದಿದೆ
ಕೆಂಚನೂರು ನಿವಾಸಿ ಗುತ್ತಿಗೆದಾರರಾಗಿರುವ ಗುಂಡು ಶೆಟ್ಟಿ ಎಂಬವರು ತಲ್ಲೂರಿನ ಬ್ಯಾಂಕಿನಲ್ಲಿ 2ಲಕ್ಷ ರೂ. ಹಣವನ್ನು ಪಡೆದು, ಕಾರಿನೊಳಗೆ ಇಟ್ಟಿದ್ದರು. ಬಳಿಕ ಅವರು ಕಾರನ್ನು ತಲ್ಲೂರು ಪೇಟೆ ಸಮೀಪದ ವಸತಿ ಸಂಕೀರ್ಣವೊಂದರ ಎದುರು ನಿಲ್ಲಿಸಿ ಬಾಡಿಗೆ ಮನೆಗೆ ತೆರಳಿದ್ದರು. 10-15 ನಿಮಿಷ ಕಳೆದು ವಾಪಾಸ್ಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂತು.

ಬ್ಯಾಂಕಿನಿಂದ ಹಣ ಡ್ರಾ ಮಾಡಿದ್ದು ಖಚಿತಪಡಿಸಿಕೊಂಡಿರುವ ಕಳ್ಳರು ಗುಂಡು ಶೆಟ್ಟಿಯವರ ಕಾರನ್ನು ಹಿಂಬಾಲಿಸಿ ಬಂದು ಕೃತ್ಯವೆಸಗಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಕಳ್ಳರು, ಕಾರಿನ ಬಲಗಡೆಯ ಕಿಟಕಿ ಗಾಜು ಒಡೆದಿದ್ದು ಡ್ಯಾಶ್ ಬೋರ್ಡ್‌ನಲ್ಲಿ ಇಟ್ಟಿದ್ದ ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಲಾಗಿದೆ. ತಲ್ಲೂರು ಜಂಕ್ಷನ್ ಸಮೀಪದ ಜನನಿಬೀಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಎದುರುಗಡೆ ವಸತಿ ಸಮುಚ್ಚಯ, ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ, ಬಸ್, ಆಟೋ ನಿಲ್ದಾಣವಿದೆ. ಹಾಡುಹಗಲೇ ನಡೆದ ಈ ಕೃತ್ಯವು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.
ಕುಂದಾಪುರ ಎಸ್ಸೈ ನಂಜಾ ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

