ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಯಡ್ತಾಡಿ ಗ್ರಾಮದ ಗರಿಕೆ ಮಠ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಬಂಡೆಕಲ್ಲುಗಳನ್ನು ಒಡೆದು ಅಕ್ರಮವಾಗಿ ಶಿಲೆಕಲ್ಲನ್ನು ಕದ್ದು ತೆಗೆದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ 03/11/2025 ರಂದು ನಾರಾಯಣ ಗೌಡ, ಹೆಡ್ ಕಾನ್ಸಟೇಬಲ್, ಬ್ರಹ್ಮಾವರ ಪೊಲೀಸ್ ಠಾಣೆ ಇವರು ಹಗಲು ಠಾಣಾ ದಿನಚರಿ ಪ್ರಭಾರ ಕರ್ತವ್ಯದಲ್ಲಿರುವಾಗ ಯಡ್ತಾಡಿ ಗ್ರಾಮದ ಗರಿಕೆ ಮಠ ಎಂಬಲ್ಲಿ ಸರಕಾರಿ ಸ್ಥಳದಲ್ಲಿ ಬಂಡೆಕಲ್ಲುಗಳನ್ನು ಒಡೆದು ಅಕ್ರಮವಾಗಿ ಶಿಲೆಕಲ್ಲನ್ನು ಕದ್ದು ತೆಗೆದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು, ಸ್ಥಳಕ್ಕೆ ಹೋಗಿ ದಾಳಿ ನಡೆಸಲು ಸಿಬ್ಬಂದಿಯವರನ್ನು ಹಾಗೂ ಪಂಚರನ್ನು ಕರೆದುಕೊಂಡು ಯಡ್ತಾಡಿ ಗ್ರಾಮದ ಗರಿಕೆಮಠ ಶಿಲೆಕಲ್ಲು ಕೋರೆಗೆ ಹೋದಾಗ ಸ್ಥಳದಲ್ಲಿ ಕಾರ್ಮಿಕರು ಬಂಡೆಕಲ್ಲುಗಳನ್ನು ಪುಡಿ ಮಾಡಿ ಶಿಲೆಕಲ್ಲುಗಳನ್ನು ತಯಾರು ಮಾಡುತ್ತಿದ್ದು, ಒಂದು 407 ಟಿಪ್ಪರ್ ವಾಹನಕ್ಕೆ ಶಿಲೆಕಲ್ಲುಗಳನ್ನು ತುಂಬಿಸುತ್ತಿದ್ದು, ಎರಡು 407 ಟಿಪ್ಪರ್ ವಾಹನಗಳು ಶಿಲೆಕಲ್ಲುಗಳನ್ನು ಲೋಡ್ ಮಾಡಲು ನಿಂತಿರುವುದು ಕಂಡು ಬಂದಿದ್ದು, ಹತ್ತಿರ ಹೋದಾಗ ಕಾರ್ಮಿಕರು ಓಡಿ ಹೋಗಿರುತ್ತಾರೆ. ಸ್ಥಳದಲ್ಲಿ ಯಾರೋ ವ್ಯಕ್ತಿಗಳು ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸ್ಥಳದಲ್ಲಿದ್ದ KA-20-AC-4263 ನೇ 407 ಟಿಪ್ಪರ್ ಚಾಲಕನ ಹೆಸರು/ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಶರತ್ ವಾಹನದ ಚಾಲಕ ಸುಕೇಶ್ ಮಾನಂಬಳ್ಳಿ ಎಂಬುದಾಗಿ, ಕಲ್ಲುಕೋರೆಯ ಮಾಲಕರ ಬಗ್ಗೆ ವಿಚಾರಿಸಿದಾಗ ಸ್ವಾಮಿನಾಥನ್ ಎಂಬುದಾಗಿ ತಿಳಿಸಿರುತ್ತಾರೆ. ಟಿಪ್ಪರ್ ಲಾರಿಯಲ್ಲಿ ಸುಮಾರು 150 ಸೈಜ್ ಶಿಲೆಕಲ್ಲುಗಳನ್ನು ಲೋಡ್ ಮಾಡಿದ್ದು ಶಿಲೆಕಲ್ಲುಗಳ ಮೌಲ್ಯ 3000/- ಆಗಬಹುದು. KA-20-C-2622ನೇ ವಾಹನ ಚಾಲಕ ಹನುಮಪ್ಪ, ವಾಹನದ ಮಾಲಕ ಮಿಥುನ್ ಎಂಬುದಾಗಿ ಕಲ್ಲುಕೋರೆಯ ಮಾಲಕರ ಮಂಜುಳಾ ಎಂಬುದಾಗಿ ತಿಳಿಸಿರುತ್ತಾರೆ. ನಂತರ KA-20-D-5153 ಟಿಪ್ಪರ್ ವಾಹನದ ಚಾಲಕ ಮುದುಕಪ್ಪ, ಮಾಲಕ ಡಿಕ್ಸನ್ ಸಸ್ತಾನ ಎಂಬುದಾಗಿ ಮತ್ತು ಕಲ್ಲುಕೋರೆಯ ಮಾಲಕ ದಿವಾಕರ ಶೆಟ್ಟಿ ಎಂಬುದಾಗಿ ತಿಳಿದುಬಂದಿರುತ್ತದೆ. ನಂತರ ಸ್ಥಳದಿಂದ ಅನತಿ ದೂರದಲ್ಲಿ ಬಂಡೆಯನ್ನು ಒಡೆದು ಶಿಲೆಕಲ್ಲುಗಳನ್ನು ತಯಾರಿಸುತ್ತಿರುವ ಬಗ್ಗೆ ಮಾಹಿತಿ ಬಂದಂತೆ ಟಿಪ್ಪರ್ ವಾಹನದ ಚಾಲಕ ಮುದುಕಪ್ಪ ಈತನ್ನಲ್ಲಿ ವಿಚಾರಿಸಿದಾಗ ಸ್ವಾಮಿನಾಥನ್‌ರವರು ಇಲ್ಲಿ ಹಾಗೂ ಇನ್ನೊಂದು ಕಡೆಯಲ್ಲಿ ಬಂಡೆಯನ್ನು ಒಡೆದು ಶಿಲೆಕಲ್ಲುಗಳನ್ನು ಮಾರಾಟ ಮಾಡುತ್ತಿದ್ದು, ಸ್ಥಳದಿಂದ ಸುಮಾರು 400ಮೀಟರ್ ದೂರ ಹೋದಾಗ ಸಾಮಿನಾಥನ್‌ರವರು ಶಿಲೆಕಲ್ಲುಗಳನ್ನು ತಯಾರು ಮಾಡುತ್ತಿದ್ದ ಇನ್ನೊಂದು ಜಾಗವನ್ನು ತೋರಿಸಿದ್ದು, ಸ್ಥಳದಲ್ಲಿ ಕೂಡ ಬಂಡೆಕಲ್ಲುಗಳನ್ನು ಒಡೆದು ಶಿಲೆಕಲ್ಲು ತಯಾರಿಸುತ್ತಿರುವ ಬಗ್ಗೆ ಕುರುಹುಗಳು ಕಂಡು ಬಂದಿರುತ್ತದೆ. ಕೋರೆ ಮಾಲಕರಾದ ಸ್ವಾಮಿನಾಥನ್, ಮಂಜುಳಾ, ದಿವಾಕರ ಶೆಟ್ಟಿ, ವಾಹನದ ಮಾಲಕರಾದ ಸುಕೇಶ್ ಮಾನಂಬಳ್ಳಿ, ವಿಥುನ್, ಡಿಕ್ಸನ್ ಸಸ್ತಾನ ಹಾಗೂ ವಾಹನದ ಚಾಲಕರುಗಳಾದ ಶರತ್, ಮುದುಕಪ್ಪ, ಹನುಮಪ್ಪರವರು ಸಮಾನ ಉದ್ದೇಶದಿಂದ ಸಂಘಟಿತರಾಗಿ ಬ್ರಹ್ಮಾವರ ತಾಲೂಕು ಯಡ್ತಾಡಿ ಗ್ರಾಮದ ಗರಿಕೆಮಠ ಎಂಬಲ್ಲಿ ಸರಕಾರಿ ಜಾಗದಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಪರವಾನಿಗೆಯನ್ನು ಪಡೆಯದೇ ಅಕ್ರಮವಾಗಿ ಬಂಡೆಯನ್ನು ಒಡೆದು ಶಿಲೆಕಲ್ಲುಗಳನ್ನು ತಯಾರು ಮಾಡಿ, ಸರಕಾರಿ ಸ್ವತ್ತನ್ನು ಕಳ್ಳತನದಿಂದ ತೆಗೆದು ಸಾಗಾಟ ಮಾರಾಟ ಮಾಡಿ ಲಘು ಸಂಘಟಿತ ಅಪರಾಧವೆಸಗಿರುವುದು ಕಂಡು ಬಂದಿರುವುದಾಗಿದೆ.

