ಗಾಜಿಯಾಬಾದ್: ದೀಪಾವಳಿ ರಾತ್ರಿ ಪತ್ನಿ ಮನೆಯ ಬಾಗಿಲು ತೆರೆಯಲು ನಿರಾಕರಿಸಿದ್ದರಿಂದ ಕೋಪಗೊಂಡ ಪತಿ ಬೆಂಕಿ ಹಚ್ಚಿಕೊಂಡ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಂದಗ್ರಾಮ್ ಪ್ರದೇಶದಲ್ಲಿ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಮೂಲತಃ ಮೀರತ್ ಜಿಲ್ಲೆಯ ಸರ್ಧಾನಾ ವ್ಯಾಪ್ತಿಯ ಬಹದ್ದೂರ್‌ಪುರ ಗ್ರಾಮ ಮೂಲದ ಟಿಂಕು ಕುಮಾರ್ ಎಂದು ಗುರುತಿಸಲಾಗಿದೆ.

ಅವರು ಕಳೆದ ಕೆಲ ವರ್ಷಗಳಿಂದ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಗಾಜಿಯಾಬಾದ್‌ನ ನಂದಗ್ರಾಮ್ ನೂರ್ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು.
ದಿನಗೂಲಿ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಟಿಂಕು ಹಾಗೂ ಅವರ ಪತ್ನಿಯ ನಡುವೆ ಕಳೆದ ಕೆಲವು ವಾರಗಳಿಂದ ಮನಸ್ತಾಪ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.ದೀಪಾವಳಿ ದಿನದ ರಾತ್ರಿ ಕುಡಿದ ಅಮಲಿನಲ್ಲಿದ್ದ ಟಿಂಕು ತಮ್ಮ ಪತ್ನಿಯ ಮನೆಗೆ ಮರಳಿದರು. ಬಾಗಿಲು ತೆರೆಯದಿದ್ದರೆ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದರು.
ಆದರೆ ಪತ್ನಿ ಯಾವುದೇ ಪ್ರತಿಕ್ರಿಯೆ ನೀಡದೆ ಬಾಗಿಲು ತೆರೆಯಲಿಲ್ಲ. ಕೋಪದ ಅಮಲಿನಲ್ಲಿ ಟಿಂಕು ತಮ್ಮ ಮೇಲೆ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡರು ಎಂದು ವರದಿ ತಿಳಿಸಿದೆ.
ಸಿಸಿಟಿವಿಯಲ್ಲಿ ಅವರು ಬೆಂಕಿ ಹಚ್ಚಿಕೊಂಡ ಬಳಿಕ ರಸ್ತೆಯ ಮೇಲೆ ಓಡಾಡುತ್ತಿರುವ ದೃಶ್ಯಗಳು ದಾಖಲಾಗಿವೆ. ಸುತ್ತಮುತ್ತಲಿನವರು ತಕ್ಷಣ ಬಟ್ಟೆ ಮತ್ತು ಮಣ್ಣಿನ ಸಹಾಯದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು.ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಟಿಂಕು ಅವರನ್ನು ಮೊದಲಿಗೆ ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ, ನಂತರ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮಂಗಳವಾರ ಮಧ್ಯಾಹ್ನ ಮೃತಪಟ್ಟರು ಎಂದು ವರದಿ ತಿಳಿಸಿದೆ.


