ಮಲ್ಪೆ : ಉಡುಪಿ ಪರಿಸರದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದ ಆರೋಪಿಯ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್ & ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ (ರಿ) ಮಲ್ಪೆ ಘಟಕ ಇದರ ಅಧ್ಯಕ್ಷರು ಮತ್ತು ಸದಸ್ಯರು ಮಲ್ಪೆ ಪೊಲೀಸ್ ಠಾಣೆಗೆ, ಕಳೆದ ಕೆಲವು ದಿನಗಳಿಂದ ಮಲ್ಪೆ ಮತ್ತು ಉಡುಪಿ ಪರಿಸರದಲ್ಲಿ ಸಂಬಂಧಪಟ್ಟ ಪ್ರಾಧಿಕಾರದಿಂದ ಅಧಿಕೃತ ಪರವಾನಿಗೆಯನ್ನು ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ ದೂರಿನಂತೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಅನಿಲ್ ಕುಮಾರ್ ಡಿ. ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ತೆಂಕನಿಡಿಯೂರು ಗ್ರಾಮದ ಬೆಳ್ಕಲೆ ಹಿರಣ್ಯಧಾಮ ಲೇಔಟ್ ಎಂಬಲ್ಲಿ ಆರ್. ರಶೀದ್ ಎಂಬವರ ಮನೆಯಲ್ಲಿ ನಿಲ್ಲಿಸಿರುವ ಕಾರುಗಳ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 18 ವಿವಿಧ ಮಾದರಿಯ ವೈಟ್ ಬೋರ್ಡ್ ಕಾರುಗಳು ನಿಲ್ಲಿಸಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಆರ್. ರಶೀದ್ ರವರಲ್ಲಿ ವಿಚಾರಿಸಿದಾಗ, ತಾನು ಈ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವುದಾಗಿ ಒಪ್ಪಿಕೊಂಡಿದ್ದು, ಈ ಎಲ್ಲಾ ಕಾರುಗಳನ್ನು ಬಾಡಿಗೆ ನೀಡಲು ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ಇದೆಯೇ ಎಂದು ಹೇಳಲಾಗಿ ಇರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದುದರಿಂದ ಸಂಬಂಧಪಟ್ಟ ಪ್ರಾಧಿಕಾರದಿಂದ ಪರ್ಮಿಟ್ ನ್ನು ಪಡೆಯದೇ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ನೀಡುತ್ತಿರುವ ಆರೋಪಿ ಅರ್ ರಶೀದ್ ತಂದೆ: ಕಾಸಿಂ, ಹಿರಣ್ಯ ಧಾಮ ಲೇಔಟ್, ತೆಂಕನಿಡಿಯೂರು, ಉಡುಪಿ ಇವನ ವಿರುದ್ಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 113/2025, ಕಲಂ:192(A), 66, 187 IMV ACT ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಳೆದ 10 ವರ್ಷಗಳಿಂದ ಲೀಲಾಜಾಲಾವಾಗಿ ಅನಧೀಕೃತ ವಾಹನ ಬಾಡಿಗೆ ನಡೆಸುತ್ತಿದ್ದ ಆರೋಪಿಯ ವಿರುದ್ಧ ಇತ್ತೀಚಿಗೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹತ್ಯೆಯಾದ ರೌಡಿ ಶೀಟರ್ ನ ತನಿಖೆ ಸಮಯದಲ್ಲೇ ಕಾನೂನು ಕ್ರಮ ಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈ ಪ್ರಕರಣ ಹಾಗೂ ರೌಡಿ ಶೀಟರ್ ಸೈಪುದ್ದೀನ್ ಹತ್ಯೆ ಪ್ರಕರಣ ಕ್ಕೂ ನಂಟಿದೆಯೇ ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರೌಡಿ ಶೀಟರ್ ಹತ್ಯಾ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಹೆಸರು ರೌಡಿಶೀಟರ್ ನ ಆಪ್ತ ಗೆಳೆಯ ಅಕ್ರಮ್. ಈ ಪ್ರಕರಣದ ಆರೋಪಿ ರಶೀದ್ ಅಕ್ರಮ್ ನ ನಿಕಟ ಸಂಭಂದಿಕ. ಇದು ಸಾರ್ವಜನಿಕ ವಲಯದಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಪ್ರಶ್ನೆಗೆ ಕಾಲವೇ ಉತ್ತರಿಸಲಿದೆ.


