Mangalore and Udupi news
Blog

ಗೆಳೆಯನಾಗಿ ಮಾರ್ಗದರ್ಶನ ಮಾಡುವುದು ಗುರುವಿನ ಕರ್ತವ್ಯ – ಪ್ರೋ ಡಾ.ರಘುನಾಥ್ ಕೆ.ಎಸ್

ಉಡುಪಿ: ಗುರು ಹಾಗು ವಿದ್ಯಾರ್ಥಿಗಳ ನಡುವೆ ವಯಸ್ಸಿನ ಅಂತರವಿದ್ದರೂ, ಗೆಳಯ, ಮಾರ್ಗದರ್ಶಕ, ನಾಯಕನಾಗಿ ವಿದ್ಯಾರ್ಥಿಗಳಿಗೆ ಬದುಕಿನ ಹೆಜ್ಜೆಯನ್ನಿಡಲು ಕಲಿಸಿ ಕೊಡುವವನೇ ಪರಿಪೂರ್ಣ ಗುರು ಎಂದು ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಪ್ರೋ.ಡಾ.ರಘುನಾಥ್ ಕೆ.ಎಸ್ ಅಭಿಪ್ರಾಯಪಟ್ಟರು.

ಬುಧವಾರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ತಾನು ಕಲಿತ ವಿದ್ಯಾಸಂಸ್ಥೆಯನ್ನು ಬೆಳೆಸುವುದರ ಜೊತೆಗೆ ಜಗ್ಗತ್ತಿನಲ್ಲೇ ತಾವೆಲ್ಲರೂ ಧ್ರುವತಾರೆಗಳಂತೆ ಮಿಂಚಬೇಕು. ಸೂರ್ಯನ ರಶ್ಮಿಯಂತೆ ಪ್ರಕಾಶಿಸುತ್ತಾ, ತಮ್ಮ ಸಾಧನೆಯ ಮೂಲಕ ಪ್ರಪಂಚ ತಮ್ಮೆಲ್ಲರನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇತಿಹಾಸವನ್ನು ಸೃಷ್ಟಿಸಿ ಎಂದು ಕಿವಿಮಾತು ಹೇಳಿದರು.

ತಾನು ಕಲಿಸಿದ ವಿದ್ಯಾರ್ಥಿಗಳು ಅತ್ಯುನ್ನತ್ತ ವ್ಯಕ್ತಿಗಳಾಗುವುದನ್ನು ನೋಡುವುದೇ ಗುರುವಿಗೆ ಸಂತಸ ನೀಡುತ್ತದೆ. ತಾವೆಲ್ಲರೂ ನನ್ನ ಮೇಲೆ ಇಟ್ಟ ಕಾಳಜಿ, ಅಭಿಮಾನಕ್ಕೆ ಚಿರ‌ಋಣಿ. ನೀವೆಲ್ಲರೂ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗುರು ಕಾಣಿಕೆಯನ್ನು ನೀಡಿ. ಜೀವನದಲ್ಲಿ ಉತ್ತಮ, ಸನ್ನಢತೆಯ ಯಶಸ್ವಿ ವ್ಯಕ್ತಿಗಳ 100 ಹೆಜ್ಜೆಯನ್ನು ಅಲ್ಲದಿದ್ದರೂ, 3 ಹೆಜ್ಜೆಯನ್ನು ಅನುಸರಿಸಿ. ನಿಮ್ಮ ಯಶಸ್ಸೇ ನನಗೆ ಗುರು ಕಾಣಿಕೆ ಎಂದು ನುಡಿದರು.

ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ, ಪ್ರಾಧ್ಯಾಪಕಿ ಡಾ.ಪ್ರೀತಿ ಹರೀಶ್‌ರಾಜ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕರಿಗೆ ಸಂತೋಷ ನೀಡುತ್ತದೆ. ರಘುನಾಥ್ ಸರ್, ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ, ಯಶಸ್ಸನ್ನು ಸಾಧಿಸಬೇಕು ಇದು ನನ್ನ ಕನಸು ಎಂದಿದ್ದಾರೆ. ಅವರ ಕನಸನ್ನು ನನಸಾಗಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಹೆಗಲಿಗೇರಿದೆ. ಅದು ನಿಮ್ಮಿಂದ ಸಾಧ್ಯ ಇದೆ. ನಿಮ್ಮ ಹಿಂದೆ ನಾವಿದ್ದೇವೆ, ನೀವು ಸ್ಪಷ್ಟವಾದ ಗುರಿಯನ್ನು ಹೊಂದಿ, ಮುನ್ನಡೆಯಿರಿ. ಗುರುಗಳು ಗದರಿಸಿದರೂ ಅದು ನಿಮ್ಮ ಒಳ್ಳೆಯದ್ದಕ್ಕೆ. ವಿದ್ಯಾರ್ಥಿಗಳ ಮೇಲಿನ ಪ್ರೀತಿ, ಮಮಕಾರ ಎಂದಿಗೂ ಕಡಿಮೆಯಾಗುವುದಿಲ್ಲ. ಎಲ್ಲ ವಿದ್ಯಾರ್ಥಿಗಳು ನಮಗೆ ಸಮಾನ. ನಿಮ್ಮ ಸಾಧನೆಯೇ ನಮಗೆ ಹಾಗು ವಿದ್ಯಾಸಂಸ್ಥೆಗೆ ಮುಕುಟಮಣಿ ಎಂದವರು ಹೇಳಿದರು.

ವಿದ್ಯಾರ್ಥಿನಿಯರಾದ ಗಣೇಶ್.ವಿ.ಶಾನುಭೋಗರ, ರೋಸ್, ದಿಶಾ, ಸಂಜನಾ ನಿವೃತ್ತ ಪ್ರಾಂಶುಪಾಲರ ಬಗ್ಗೆ ಅನಿಸಿಕೆ ಹೇಳಿ, ಭಾವುಕರಾದರು.

ವೇದಿಕೆಯಲ್ಲಿ ವಿದ್ಯಾರ್ಥಿ ಮೂರನೇ ವರ್ಷದ ಸಂಘದ ಅಧ್ಯಕ್ಷ ಶಮಂತ್, ಪ್ರೋ. ರೋಹಿತ್.ಎಸ್.ಆಮೀನ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ವಿನಯಾ ಸ್ವಾಗತಿಸಿ, ಅಚಲ ಅತಿಥಿಗಳನ್ನು ಪರಿಚಯಿಸಿದರು. ಆ್ಯನ್ಸಿಂಟ್ ವಂದಿಸಿದರು. ಶ್ರೀಲಕ್ಷ್ಮೀ.ಆರ್.ನಂಬಿಯಾರ್ ನಿರೂಪಿಸಿದರು.

ಕೋಟ್ – ೧

ನೇರ ನುಡಿ, ನಿಷ್ಕಲ್ಮಶ ಹೃದಯಿ ರಘುನಾಥ್ ಸರ್ ಅವರನ್ನು ಬೀಳ್ಕೊಡಲು ಮನಸ್ಸು ಭಾರವಾಗುತ್ತಿದೆ. ಕರೋನಾ ಮಹಾಮಾರಿಯ ವೇಳೆ ಕಡಿಮೆ ಅವಧಿಯಲ್ಲಿ ಕಾಲೇಜಿನ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದ ಕೀರ್ತಿ ರಘುನಾಥ್ ಸರ್ ಅವರದ್ದು. ಅವರಂತಹ ನೇರನುಡಿಯ ವ್ಯಕ್ತಿಗಳು ಸಿಗುವುದು ಅಪರೂಪ. ಪಿಯುಸಿ ಪದವಿ ಪಡೆದು, ಎಲ್‌ಎಲ್‌ಬಿ ಸೇರ್ಪಡೆಗೊಂಡ ನಮಗೆ, ಸರಿಯಾದ ಸಮಯಕ್ಕೆ ಸೂಕ್ತ ವ್ಯಕ್ತಿಯನ್ನು ಗುರುವಾಗಿ ನೀಡಿದ ದೇವರಿಗೆ ದೊಡ್ಡ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಮ್ಮ ಪ್ರಾರ್ಚಾರ್ಯರ ಮೇಲೆ ಶೃಂಗೇರಿ ಶಾರದಾಂಬೆಯ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.

ಶ್ರೀವತ್ಸ ಗಾಂವ್ಸ್‌ಕರ್
ಅಧ್ಯಕ್ಷ,
5ನೇ ವರ್ಷ, ವಿಬಿಸಿಎಲ್ ಕಾನೂನು ಕಾಲೇಜ್,
ಉಡುಪಿ.

Related posts

Leave a Comment