ಮಂಗಳೂರು: ದ್ವಿಚಕ್ರವಾಹನವೊಂದು ಹೆದ್ದಾರಿಯ ಗುಂಡಿಗೆ ಬಿದ್ದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಸವಾರೆಯ ಮೇಲೆ ಮೀನಿನ ಲಾರಿ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ಕೂಳೂರು ರಾಯಲ್ ಓಕ್ ಬಳಿ ನಡೆದಿದೆ.
ಮೃತರನ್ನು ಎ.ಜೆ. ಆಸ್ಪತ್ರೆಯ ಸಿಬ್ಬಂದಿ ಮಾಧವಿ ಎಂದು ಹೇಳಲಾಗುತ್ತಿದೆ.
ಇವರು ತನ್ನ ದ್ವಿಚಕ್ರವಾಹನದಲ್ಲಿ ಕೂಳೂರು ಕಡೆಯಿಂದ ಮಂಗಳೂರಿನ ಎಜೆ ಆಸ್ಪತ್ರೆಗೆ ಉದ್ಯೋಗ ನಿಮಿತ್ತ ತೆರಳುತ್ತಿದ್ದ ವೇಳೆ ಸ್ಕೂಟಿ ಹೆದ್ದಾರಿಯ ಗುಂಡಿಗೆ ಬಿದ್ದು ಪಲ್ಟಿಯಾಗಿದೆ. ಈ ವೇಳೆ ರಸ್ತೆಗೆ ಎಸೆಯಲ್ಪಟ್ಟ ಮಾಧವಿ ಅವರಮೇಲೆ ಹಿಂದಿನಿಂದ ಬರುತ್ತಿದ್ದ ಮೀನಿನ ಲಾರಿ ಹರಿದು ಅವರು ಸ್ಥಳದಲ್ಲೇ ಮೃತಪಟ್ಟರೆಂದು ಹೇಳಲಾಗಿದೆ.
ಅಪಘಾತದ ರಭಸಕ್ಕೆ ಮಾಧವಿ ಅವರ ಹೊಟ್ಟೆಯ ಮೇಲ್ಬಾಗದಿಂದ ಲಾರಿ ಚಲಿಸಿತ್ತು ಎನ್ನಲಾಗಿದೆ. ಮೃತದೇಹವನ್ನು ನಗರದ ಎ.ಜೆ. ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಡಿಕ್ಕಿಹೊಡೆದ ಮೀನಿನ ಲಾರಿ ಮತ್ತು ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.