ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಪರಪ್ಪಾಡಿಯಲ್ಲಿ ಪತ್ನಿಯೇ ಪತಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
14 ವರ್ಷಗಳ ಹಿಂದೆ ಈ ದಂಪತಿ ಒಟ್ಟಿಗೆ ಸೇರಿ ಪಕ್ಕದ ಮನೆಯ ವೃದ್ಧನನ್ನು ಕಡಿದು ಕೊಲೆ ಮಾಡಿದ್ದರು. ಇದೀಗ ಪತ್ನಿಯೇ ಗಂಡನ ಕೊಲೆಗೆ ಯತ್ನಿಸಿದ್ದಾಳೆ.
ನಿಟ್ಟೆ ಪರಪ್ಪಾಡಿಯ ಶೇಖರ ಮೂಲ್ಯ(65) ನನ್ನು ಪತ್ನಿ ಮಾಲತಿ ಮೂಲ್ಯ, ಕುಡಿದ ಮತ್ತಿನಲ್ಲಿ ಗಂಡನನ್ನು ಮನಸೋ ಇಚ್ಚೆ ಕಡಿದು ಕಡಿದು ಹತ್ಯೆಗೆ ಯತ್ನಿಸಿದ್ದಾಳೆ.
ಸ್ವಲ್ಪ ಮತ್ತು ಇಳಿದ ಬಳಿಕ ತನ್ನ ಗಂಡನನ್ನು ಅಪರಿಚಿತ ವ್ಯಕ್ತಿಗಳು ಕಡಿದು ಪರಾರಿಯಾಗಿದ್ದಾರೆ ಎಂದು ಕಥೆ ಕಟ್ಟಿ ಸಂಬಂಧಿಕರನ್ನು ನಂಬಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾಳೆ.
ಶೇಖರ ಮೂಲ್ಯ ಹಾಗೂ ಮಾಲತಿ ಮೂಲ್ಯ ದಂಪತಿ ಕಳೆದ 2011ರಲ್ಲಿ ನೆರೆಮನೆಯ ರಾಮಣ್ಣ ಮೂಲ್ಯ(75) ಎಂಬವರನ್ನು ತಮ್ಮ ಮನೆಯಲ್ಲಿ ಕಡಿದು ಕೊಲೆ ಮಾಡಿ ಶವವನ್ನು ಮನೆಯ ಅಂಗಳದಲ್ಲಿ ಎಸೆದಿದ್ದರು. ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಕೊಲೆ ಪ್ರಕರಣದಲ್ಲಿ ಗಂಡ ಹೆಂಡತಿ ಜೀವಾವಧಿ ಶಿಕ್ಷೆಗೆ ಒಳಗಾಗಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆ ಆಧಾರದಲ್ಲಿ 2021 ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.
ದಂಪತಿ ಕುಡಿದು ನಿತ್ಯ ಜಗಳವಾಡುತ್ತಿದ್ದರು. ಸೆ.6 ರಂದು ರಾತ್ರಿ ಸುಮಾರು10 ಗಂಟೆ ಸುಮಾರಿಗೆ ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಪತ್ನಿ ಮಾಲತಿ ಪತಿ ಶೇಖರ ಮೂಲ್ಯ ಅವರಿಗೆ ಕತ್ತಿಯಿಂದ ಕಡಿದು ಭೀಕರವಾಗಿ ಹಲ್ಲೆ ನಡೆಸಿದ್ದಾಳೆ.
ಶೇಖರ ಮೂಲ್ಯ ತೀವ್ರ ರಕ್ತಸ್ರಾವಗೊಂಡು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ವೇಳೆ ತನ್ನ ಗಂಡನಿಗೆ ಅಪರಿಚಿತ ವ್ಯಕ್ತಿಗಳು ಕಡಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮಾಲತಿ ಮೂಲ್ಯ ತನ್ನ ಮಗಳಿಗೆ ಮೊಬೈಲ್ ಕರೆ ಮಾಡಿ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಶೇಖರ ಮೂಲ್ಯ ಅವರನ್ನು ಮಗಳು ಅಳಿಯ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆಯ ಕುರಿತು ಮಾಹಿತಿ ಕಲೆ ಹಾಕಿದ ಕಾರ್ಕಳ ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಕುಮಾರ್ ಸಂಶಯಗೊಂಡು ಪತ್ನಿ ಮಾಲತಿ ಮೂಲ್ಯ ಅವರನ್ನು ತೀವ್ರ ವಿಚಾರಣೆ ನಡೆಸಿದಾಗ ಗಂಡ ಕುಡಿದು ಬಂದು ಜಗಳವಾಡುತ್ತಿದ್ದ ಹಾಗಾಗಿ ನಾನೇ ಗಂಡನಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾಗಿ ತಪ್ಪು ಒಪ್ಪಿಕೊಂಡಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆರೋಪಿ ಮಾಲತಿ ಮೂಲ್ಯ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸನ್ನಡತೆ ಆಧಾರದಲ್ಲಿ ಬಿಡುಗಡೆಯಾಗಿ ಕೇವಲ 4 ವರ್ಷದಲ್ಲೇ ಪತಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿ ಮತ್ತೆ ಜೈಲು ಸೇರಿದ್ದಾಳೆ.