ಆಸ್ಕರ್ ಆವಾರ್ಡ್ ವಿನ್ನರ್, ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಎಆರ್ ರೆಹಮಾನ್ ದಾಂಪತ್ಯದಲ್ಲಿ ಬಿರುಕು ಮೂಡಿರುವುದು ದೃಢವಾಗಿದೆ. ಪತ್ನಿ ಸೈರಾ ಬಾನು ಪತಿಯಿಂದ ವಿಚ್ಛೇದನ ಪಡೆದು ಬೇರ್ಪಡುವುದಾಗಿ ಘೋಷಿಸಿದ್ದಾರೆ. ನ. 19ರ ರಾತ್ರಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ ಬಿಗ್ ಶಾಕ್ ಕೊಟ್ಟಿದ್ದಾರೆ. 29 ವರ್ಷಗಳ ದಾಂಪತ್ಯಕ್ಕೆ ಇಬ್ಬರು ತೆರೆ ಎಳೆದಿದ್ದಾರೆ.

ಮದುವೆಯಾದ ಹಲವು ವರ್ಷಗಳ ನಂತರ ಸೈರಾ ಅವರು ತಮ್ಮ ಪತಿ ಎಆರ್ ರೆಹಮಾನ್ ನಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಒತ್ತಡ ಮತ್ತು ತೊಂದರೆಗಳು ತಮ್ಮ ನಡುವೆ ಸರಿಪಡಿಸಲಾಗದ ಅಂತರ ಸೃಷ್ಟಿಸಿವೆ. ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಹಾಗೂ ನಿರ್ಧಾರ ಗೌರವಿಸಲು ಮನವಿ ಮಾಡಿದ್ದೇನೆ ಎಂದು ಸೈರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿ ಆಗಿದೆ.

1989ರಲ್ಲಿ ಮುಸ್ಲಿಂ ಆಗಿ ಮತಾಂತರ
ಹಿAದೂ ಧರ್ಮದಲ್ಲಿ ಹುಟ್ಟಿದ್ದ ಎಆರ್ ರಹಮಾನ್ ಅವರ ಮೂಲ ಹೆಸರು ದಿಲೀಪ್ ಕುಮಾರ್. 1989ರಲ್ಲಿ ಇವರು ಮುಸ್ಲಿಂ ಮತಕ್ಕೆ ಮತಾಂತರ ಆಗುತ್ತಾರೆ. ನಂತರ ಅಲ್ಲಾ ರಖಾ ರಹಮಾನ್ ಎಂದು ಹೆಸರು ಬದಲಾಯಿಸಿಕೊಳ್ಳುತ್ತಾರೆ.

1995ರಲ್ಲಿ ರೆಹಮಾನ್ – ಸೈರಾ ಮದುವೆ
ಎ.ಆರ್ ರೆಹಮಾನ್ 1995 ರಲ್ಲಿ ಸೈರಾ ಅವರನ್ನು ವಿವಾಹವಾದರು. ಇವರ ಮದುವೆ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಸಿಮಿ ಗರೆವಾಲ್ ಅವರೊಂದಿಗಿನ ಚಾಟ್‌ನಲ್ಲಿ, ರೆಹಮಾನ್ ತನ್ನ ತಾಯಿ ಈ ಮದುವೆಯನ್ನು ನಿಶ್ಚಯ ಮಾಡಿದ್ರು ಎಂದು ಹೇಳಿಕೊಂಡಿದ್ರು. ನನಗಾಗಿ ಹುಡುಗಿಯನ್ನ ಹುಡುಕುವಷ್ಟು ಸಮಯ ನನಗೆ ಇರಲಿಲ್ಲ ಎಂದು ಎ.ಆರ್ ರೆಹಮಾನ್ ಹೇಳಿದ್ರು. ಅಮ್ಮ ಒಪ್ಪಿ ಮಾಡಿದೆ ಮದುವೆ ಇದು ಎಂದು ಸಂದರ್ಶನದಲ್ಲಿ ಹೇಳಿದ್ರು.

ಬಾಲಿವುಡ್‌ನ ಬಹುಬೇಡಿಕೆ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ಹಾಡುಗಳಿಗೆ ತಲೆದೂಗದವರೇ ಇಲ್ಲ. 7 ಬಾರಿ ನ್ಯಾಷನಲ್ ಅವಾರ್ಡ್ ಗೆದ್ದ ಭಾರತದ ಏಕೈಕ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ. 1992ರಲ್ಲಿ ಮಣಿರತ್ನಂ ಅವರ ರೋಜಾ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು.
ನ್ಯಾಷನಲ್ ಅವಾರ್ಡ್
| ರೋಜಾ | 1992 | ತಮಿಳು |
| ಮಿನ್ಸಾರ ಕನವು | 1996 | ತಮಿಳು |
| ಲಗಾನ್ | 2001 | ಹಿಂದಿ |
| ಕಣ್ಣತ್ತಿಲ್ ಮುತ್ತಮಿಟ್ಟಲ್ | 2002 | ತಮಿಳು |
| ಕಾಟ್ರು ವೆಳಿಯಿಡೈ | 2017 | ತಮಿಳು |
| ಮಾಮ್ | 2017 | ಹಿಂದಿ |
| ಪೊನ್ನಿಯಿನ್ ಸೆಲ್ವನ್-1 | 2022 | ತಮಿಳು |
2002ರ ನಂತರ ಅವರು ಹಲವಾರು ಪ್ರಮುಖ ಅವಾರ್ಡ್ ಗಳನ್ನು ಪಡೆದರು. ಇದರಲ್ಲಿ ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ ಚಾಯ್ಸ್ ಮೂವಿ ಅವಾರ್ಡ್ಸ್ ಹಾಗೂ ಆಸ್ಕರ್ ಕೂಡಾ ಸೇರಿದೆ. ಸ್ಲಮ್ ಡಾಗ್ ಮಿಲಿಯನೇರ್ ಗಾಗಿ ಅವರು ಆಸ್ಕರ್ ಪಡೆದರು.

ಎಆರ್ ರೆಹಮಾನ್ ನವೆಂಬರ್ 19 ರಂದು ತಮ್ಮ ಹಾಗೂ ಪತ್ನಿ ಸಾಯಿರಾ ನಡುವಿನ ವಿಚ್ಛೇದನದ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕುವ ಮೂಲಕ ದೃಢೀಕರಣ ನೀಡಿದ್ದರು. ನಾನು ದಾಂಪತ್ಯದ 30ನೇ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ನಮ್ಮ ಬದುಕು ಬೇರೆ ಯೋಜನೆಯನ್ನೇ ಹೊಂದಿತ್ತು ಎಂದು ಅವರು ನೋವಿನಲ್ಲಿ ಬರೆದುಕೊಂಡಿದ್ದರು. ‘ನಾವು ಮೂವತ್ತರ ದಾಂಪತ್ಯಕ್ಕೆ ಕಾಲಿಡುವ ಸಂದರ್ಭದಲ್ಲಿ ಬದುಕು ನಮ್ಮ ಜೀವನದಲ್ಲಿ ಬೇರೆಯದ್ದನ್ನೇ ಯೋಜಿಸಿದೆ. ಆದರೆ ಎಲ್ಲವೂ ಕಾಣದ ಅಂತ್ಯವನ್ನು ಹೊಂದಿದೆ. ಘಾಸಿಯಾದ ಹೃದಯ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಒಡೆದ ಕನ್ನಡಿ ಎಂದಿಗೂ ಒಂದಾಗಲು ಸಾಧ್ಯವಿಲ್ಲ. ನಾವು ಅತ್ಯಂತ ನೋವಿನ ಘಟ್ಟದಲ್ಲಿ ಸಾಗುವ ಈ ಹೊತ್ತಿನಲ್ಲಿ ನಿಮ್ಮ ದಯೆ ನಮ್ಮ ಮೇಲಿರಲಿ ಮತ್ತು ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಸ್ನೇಹಿತರಾದ ನಿಮಗೆ ಧನ್ಯವಾದಗಳು‘ ಎಂದು ರೆಹಮಾನ್ ಟ್ವೀಟ್ ಮಾಡಿದ್ದಾರೆ.

ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ವಿಚ್ಛೇದನದ ಸುದ್ದಿ ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ.

