
ಅಂತಾರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿ ಲಂಕಾ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ತಮಿಳುನಾಡಿನ ರಾಮೇಶ್ವರಂನ 32 ಮೀನುಗಾರರನ್ನು ಭಾನುವಾರ ಮುಂಜಾನೆ ಶ್ರೀಲಂಕಾ ನೌಕಾಪಡೆ ಬಂಧಿಸಿದ್ದು, 5 ದುಬಾರಿ ಯಾಂತ್ರೀಕೃತ ದೋಣಿಗಳನ್ನು ಕೂಡ ವಶಕ್ಕೆ ಪಡೆದಿದೆ.
ಬಂಧಿತ ಮೀನುಗಾರರನ್ನು ಹೆಚ್ಚಿನ ವಿಚಾರಣೆಗಾಗಿ ಶ್ರೀಲಂಕಾದ ಜಾಫ್ನಾಕ್ಕೆ ಕರೆದೊಯ್ಯಲಾಗಿದೆ ಎಂದು ರಾಮೇಶ್ವರಂನ ಮೀನುಗಾರರ ಮುಖಂಡರು ಹೇಳಿದ್ದಾರೆ. ಹಾಗೂ ಶ್ರೀಲಂಕಾದ ಜಲಪ್ರದೇಶದಲ್ಲಿ ಅಂತರರಾಷ್ಟ್ರೀಯ ಕಡಲ ಗಡಿ ರೇಖೆ (ಐಎಂಬಿಎಲ್) ದಾಟಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿದೆ ಎಂದು ತಮಿಳುನಾಡು ಕರಾವಳಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರನ್ನು ಕೂಡಲೇ ಬಿಡುಗಡೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಬಂಧಿತ ಮೀನುಗಾರರ ಕುಟುಂಬಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿವೆ. ಜೊತೆಗೆ ಬಂಧಿತ ಮೀನುಗಾರರು ಮತ್ತು ವಶಪಡಿಸಿಕೊಂಡ ದೋಣಿಗಳ ಬಿಡುಗಡೆಗಾಗಿ ತ್ವರಿತ ರಾಜತಾಂತ್ರಿಕ ಕ್ರಮ ಕೈಗೊಳ್ಳುವಂತೆ ಮೀನುಗಾರರ ಮುಖಂಡರು ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಇನ್ನು ಶ್ರೀಲಂಕಾದೊಂದಿಗೆ ದ್ವಿಪಕ್ಷೀಯ ಒಪ್ಪಂದದ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಮೀನುಗಾರರ ಮುಖಂಡರು ಕರೆ ನೀಡಿದ್ದಾರೆ. ತಮಿಳುನಾಡಿನಾದ್ಯಂತದ ಮೀನುಗಾರರ ಸಂಘಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಬಂಧನಗಳು ನಡೆಯದಂತೆ ತುರ್ತಾಗಿ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರದ ಮೂಲಕ ಕೋರಿವೆ.