ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಮೈದಾನದಲ್ಲಿ ಮಾತ್ರವಲ್ಲದೆ ಡಿಜಿಟಲ್ ಕ್ಷೇತ್ರದಲ್ಲೂ ದಾಖಲೆ ಮಾಡಿದ್ದು, ಸಾಮಾಜಿಕ ಮಾದ್ಯಮಗಳಲ್ಲಿ 1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕ್ರಿಸ್ಟಿಯಾನೋ ರೊನಾಲ್ಡೊ ಅವರು ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಖ್ಯಾತಿ ಗಳಿಸಿದ್ದಾರೆ. ಸದ್ಯ ಅವರು ಸೌದಿ ಅರೇಬಿಯಾದ ಅಲ್ ನಸ್ರ್ ಫುಟ್ಬಾಲ್ ಕ್ಲಬ್ ಗೆ ಆಡುತ್ತಿದ್ದಾರೆ. ಜೊತೆಗೆ ಪೋರ್ಚುಗಲ್ ನ್ಯಾಷನಲ್ ಟೀಂನ್ನು ಪ್ರತಿನಿಧಿಸುತ್ತಾರೆ. ಇದಲ್ಲದೆ ಜಾಗತಿಕವಾಗಿ ಅತ್ಯಂತ ಪ್ರಭಾವಶಾಲಿ ಕ್ರೀಡಾಪಟುವಾಗಿ ಹೊರಹೊಮ್ಮಿದ್ದಾರೆ.
“ನಾನು ದಾಖಲೆಗಳನ್ನು ಬೆನ್ನಟ್ಟುವುದಿಲ್ಲ, ದಾಖಲೆಗಳು ನನ್ನನ್ನು ಬೆನ್ನಟ್ಟುತ್ತವೆ.” ಎಂಬುವುದು ಕ್ರಿಸ್ಟಿಯಾನೋ ರೊನಾಲ್ಡೊ ಅವರ ನೆಚ್ಚಿನ ಸಾಲುಗಳಾಗಿದೆ. ಇದೀಗ ಮೈದಾನದ ಒಳಗೆ ಮತ್ತು ಹೊರಗೆ ಎರಡೂ ದಾಖಲೆಗಳನ್ನು ನಿರ್ಮಿಸುವ ಮೂಲಕ ರೊನಾಲ್ಡೊ ಇತಿಹಾಸ ನಿರ್ಮಿಸಿದ್ದಾರೆ.
ರೊನಾಲ್ಡೊ ಅವರು Instagram ನಲ್ಲಿ 639 ಮಿಲಿಯನ್, ಫೇಸ್ಬುಕ್ ನಲ್ಲಿ 170 ಮಿಲಿಯನ್, ಎಕ್ಸ್( X) ನಲ್ಲಿ 113 ಮಿಲಿಯನ್ ಮತ್ತು ಯೂಟ್ಯೂಬ್ ನಲ್ಲಿ 60.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, ಮೊದಲ ದಿನದಲ್ಲಿ 15 ಮಿಲಿಯನ್ ಚಂದಾದಾರರನ್ನು ಮತ್ತು ಮೊದಲ ವಾರದಲ್ಲಿ 50 ಮಿಲಿಯನ್ ಚಂದಾದಾರರನ್ನು ಪಡೆದುಕೊಂಡಿದ್ದರು. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಪಡೆದ ಏಕೈಕ ಚಾನೆಲ್ ಎಂದು UR Cristiano ಯೂಟ್ಯೂಬ್ ಚಾನಲ್ ಐತಿಹಾಸಿಕ ದಾಖಲೆ ನಿರ್ಮಿಸಿತ್ತು.
ಈ ಕುರಿತು ಎಕ್ಸ್ ನಲ್ಲಿ ವಿಶೇಷ ಪೋಸ್ಟ್ ಮಾಡಿ ಕ್ರಿಸ್ಟಿಯಾನೊ ರೊನಾಲ್ಡೊ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. 1 ಬಿಲಿಯನ್ ಅನುಯಾಯಿಗಳ ಮೂಲಕ ನಾವು ಇತಿಹಾಸವನ್ನು ನಿರ್ಮಿಸಿದ್ದೇವೆ. ಇದು ಕೇವಲ ಒಂದು ಸಂಖ್ಯೆಗೆ ಸೀಮಿತವಾಗಿಲ್ಲ, ಆಟ ಮತ್ತು ಅದರಾಚೆಗಿನ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ಮಡೈರಾದ ಬೀದಿಗಳಿಂದ ಹಿಡಿದು ದೊಡ್ಡ ದೊಡ್ಡ ಪಂದ್ಯಾವಳಿಗಳಲ್ಲಿ ನಾನು ನನ್ನ ಕುಟುಂಬಕ್ಕಾಗಿ ಮತ್ತು ಅಭಿಮಾನಿಗಳಿಗಾಗಿ ಆಡಿದ್ದೇನೆ. ಈಗ ನಾವು 1 ಬಿಲಿಯನ್ ಜನರು ಒಟ್ಟಿಗೆ ನಿಂತಿದ್ದೇವೆ. ಎಲ್ಲ ಏರಿಳಿತಗಳ ವೇಳೆ ನೀವು ನನ್ನೊಂದಿಗೆ ಪ್ರತಿ ಹಂತದಲ್ಲೂ ನಿಂತುಕೊಂಡಿದ್ದೀರಿ, ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ, ನಿಮ್ಮ ಬೆಂಬಲಕ್ಕಾಗಿ ಮತ್ತು ನನ್ನ ಜೀವನದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.