ಮಂಗಳೂರು : ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರ ಆದೇಶದಂತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ, ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಏಪ್ರಿಲ್ 24 ರಂದು ಮುಂಜಾನೆ 12.40 ಕ್ಕೆ ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಹೊಯಿಗೆ ಬಜಾರ್ ರಸ್ತೆಯಲ್ಲಿರುವ ಗೂಡುಷೆಡ್ಡೆ ಹೋಗುವ ನಿರೇಶ್ವಲ್ಯ ರಸ್ತೆ ಬದಿಯಲ್ಲಿ, ಬಜಿಲಕೇರಿ ನಿವಾಸಿ ಮಹೇಶ್ ಶೆಟ್ಟಿ ಅಲಿಯಾಸ್ ಚುನ್ನಿ ಎಂಬಾತ ತನ್ನ ಹೊಂದ ಆಕ್ಟಿವಾದಲ್ಲಿ ಗಾಂಜಾ ಮತ್ತು ಡ್ರಗ್ಸ್ ಮಾರಾಟ ಮಾಡುವುದನ್ನು ಪತ್ತೆ ಹಚ್ಚಿ ಆತನನ್ನು ಬಂಧಿಸಿದ್ದಾರೆ.
ಆತನ ಗಾಡಿಯಲ್ಲಿ 258 ಗ್ರಾಂ ಗಾಂಜಾ ಸಿಕ್ಕಿದ್ದು, N.D.P.S. ಕಾಯ್ದೆ 1985ರ 8(c) 25, 27(b) ಮತ್ತು 20(b), (ii)(A) ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಒಟ್ಟಾಗಿ ಈತನ ಬಳಿಯಿಂದ 72,250 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಲಾಗಿದೆ.
ಕೆಲವೊಂದು ಬಲ್ಲ ಮೂಲಗಳ ಮಾಹಿತಿಯ ಪ್ರಕಾರ ಈ ಮಹೇಶ್ ಶೆಟ್ಟಿ ಅಲಿಯಾಸ್ ಚುನ್ನಿ ಎಂಬಾತ ಮಂಗಳೂರು ಭಾಗದಲ್ಲಿ ಡ್ರಗ್ಸ್ ಮಾರಾಟದಲ್ಲಿ ಬಹುದೊಡ್ಡ ಪೆಡ್ಲರ್ ಆಗಿದ್ದು, ತಲಪಾಡಿ ಭಾಗದ ಕೆಲವೊಂದು ಯುವಕರು ಇವನ ಡೀಲರ್ ಆಗಿದ್ದಾರೆ, ಪಡುಬಿದ್ರಿ ಭಾಗದವರೆಗೂ ಈತ ಗಾಂಜಾ, ಡ್ರಗ್ಸ್ ಮತ್ತು ಇನ್ನಿತರ ಮಾದಕವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಪೊಲೀಸ್ ಅಧಿಕಾರಿಗಳು ಇವನ ಬಗ್ಗೆ ಸರಿಯಾದ ತನಿಖೆ ನಡೆಸಿ, ಈತನ ಹಿಂದಿರುವ ಡೀಲರ್ ಗಳ ಹೆಡೆಮುರಿ ಕಟ್ಟಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
