ನಾಗ್ಪುರ: ಮಾರ್ಚ್ 17 ರಂದು ನಡೆದ ನಾ ನಾಗುರ ಗಲಭೆಯ ಪ್ರಮುಖ ರೂವಾರಿ ಫಾಹೀಮ್ ಖಾನ್ ಅವರ ಎರಡು ಅಂತಸ್ತಿನ ಮನೆಯನ್ನು ಸೋಮವಾರ ನಾಗ್ಪುರ ಮುನ್ಸಿಪಲ್ ಕಾರ್ಪೊರೇಷನ್ (NMC) ನಡೆಸಿದ ಜಾರಿ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಡವಲಾಗಿದೆ.
ಭಾರಿ ಪೊಲೀಸ್ ಪಡೆಯ ಸಮ್ಮುಖದಲ್ಲಿ ಫಹೀಮ್ ಖಾನ್ ಅವರ ನಿವಾಸದ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಯಿತು, ಎರಡು, ಮೂರು ಬುಲ್ಲೋಜರ್‌ಗಳು ಫಹೀಮ್ ಖಾನ್ ಅವರ ಮನೆಯ ಕೆಲವು ಭಾಗಗಳನ್ನು ನೆಲಸಮಗೊಳಿಸಿದವು. ಅಕ್ರಮ ಕಟ್ಟಡ ನಿರ್ಮಾಣಗಳ ವಿರುದ್ಧ ನಾಗರಿಕ ಸಂಸ್ಥೆಯ ಧ್ವಂಸ ಕಾರ್ಯಾಚರಣೆಯ ಭಾಗವಾಗಿ ಅನಧಿಕೃತ ವಸತಿ ರಚನೆಯನ್ನು ನೆಲಸಮ ಮಾಡಲಾಯಿತು.
ಭಾರೀ ಪೊಲೀಸ್ ನಿಯೋಜನೆಯನ್ನು ಮಾಡಿ ಅತಿಕ್ರಮಣ ವಿರೋಧಿ ದಳವು ಬೆಳಿಗ್ಗೆ 10 ಗಂಟೆ ಸುಮಾರಿಗೆ ಎರಡು ಜೆಸಿಬಿ ಮೂಲಕ ಆಗಮಿಸಿ ಧ್ವಂಸ ಕಾರ್ಯಾಚರಣೆ ನಡೆಸಿತು. ಮಾರ್ಚ್ 20 ರಂದು ಆಶಿ ನಗರ ವಲಯ ಅಧಿಕಾರಿಗಳು ಫಾಹೀಮ್ ಖಾನ್ ಅವರ ಮನೆಯನ್ನು ಪರಿಶೀಲನೆ ನಡೆಸಿದ ನಂತರ ಅಕ್ರಮ ನಿರ್ಮಾಣ ಬೆಳಕಿಗೆ ಬಂದಿತ್ತು. ಮಾರ್ಚ್ 21 ರಂದು ಅಧಿಕಾರಿಗಳು ನೆಲಸಮ ಮಾಡುವ ಬಗ್ಗೆ ನೋಟಿಸ್ ನೀಡಿತ್ತು.
86.48 ಚದರ ಮೀಟರ್ ವಿಸ್ತೀರ್ಣದ ಕಟ್ಟಡವನ್ನು ಕೆಡವಲು 24 ಗಂಟೆಗಳ ಅಂತಿಮ ಗಡುವು ನೀಡಿದ್ದರೂ, ಫಾಹೀಮ್ ಖಾನ್ ಅವರ ಕುಟುಂಬವು ನೋಟಿಸ್‌ಗೆ ಕೇರ್ ಅಂದಿರಲಿಲ್ಲ. ಫಾಹೀಮ್ ಖಾನ್ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನಾ ಕಾಯ್ದೆ, 1966 ರ ಉಲ್ಲಂಘನೆಯನ್ನು ಉಲ್ಲೇಖಿಸಿ, ಅವರ ಪತ್ನಿ ಜಹಿರುನ್ನೀಸಾ ಶಮೀಮ್ ಖಾನ್ ಅವರ ಅಡಿಯಲ್ಲಿ ನೋಂದಾಯಿಸಲಾದ ಮನೆಯನ್ನು NMC ನೆಲಸಮಗೊಳಿಸಿತು.
ಗಲಭೆ ಆರೋಪಿಯ ಆಸ್ತಿಯನ್ನು ಗುರಿಯಾಗಿಸಿಕೊಂಡು ಎನ್‌ಎಂಸಿ ಈ ಕ್ರಮ ಕೈಗೊಂಡಿರುವುದು ಇದೇ ಮೊದಲು. ಅನಧಿಕೃತ ನಿರ್ಮಾಣದ ಬಗ್ಗೆ ನಿವಾಸಿಗಳಿಂದ ಹೆಚ್ಚುತ್ತಿರುವ ದೂರುಗಳ ಹಿನ್ನೆಲೆಯಲ್ಲಿ ನಾಗರಿಕ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಕಾನೂನು ಅನುಮತಿಸಿದರೆ ಬುಲ್ಲೋಜರ್ ಕ್ರಮ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ಯುಪಿ ಶೈಲಿಯ ಬುಲ್ಲೋಜರ್ ಕ್ರಮ ಕೈಗೊಳ್ಳುವ ಬಗ್ಗೆ ಸುಳಿವು ನೀಡಿದ್ದರು.
ಯಶೋಧರ ನಗರದ ಸಂಜಯ್ ಬಾಗ್ ಕಾಲೋನಿಯಲ್ಲಿರುವ ಖಾನ್ ಮನೆಯನ್ನು ಅವರ ಪತ್ನಿಯ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಮಾರ್ಚ್ 17 ರಂದು ನಾಗ್ಪುರದಲ್ಲಿ ನಡೆದ ಹಿಂಸಾಚಾರದ ನಂತರ ಬಂಧಿಸಲಾದ 100 ಕ್ಕೂ ಹೆಚ್ಚು ಜನರಲ್ಲಿ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ (ಎಂಡಿಪಿ) ನಾಯಕ ಫಾಹೀಮ್ ಖಾನ್ ಕೂಡ ಒಬ್ಬರು.
ಛತ್ರಪತಿ ಸಂಭಾಜಿನಗರದಲ್ಲಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಧಾರ್ಮಿಕ ಶಾಸನಗಳನ್ನು ಹೊಂದಿರುವ ‘ಚಾದರ್’ ಅನ್ನು ಸುಟ್ಟುಹಾಕಲಾಗಿದೆ ಎಂಬ ವದಂತಿಗಳು ಹರಡಿದ ನಂತರ ಗಲಭೆ ಪ್ರಾರಂಭವಾಯಿತು. ಈ ಘರ್ಷಣೆಗಳು ನಾಗ್ಪುರದ ಹಲವಾರು ಪ್ರದೇಶಗಳಲ್ಲಿ ವ್ಯಾಪಕ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವಿಕೆಗೆ ಕಾರಣವಾಯಿತು, ಮೂವರು ಪೊಲೀಸ್ ಉಪ ಆಯುಕ್ತರು ಸೇರಿದಂತೆ 33 ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು.
ಘಟನೆಯ ನಂತರ ಶಾಂತಿ ಕಾಪಾಡಲು, ಕರ್ಫ್ಯೂ ತೆಗೆದುಹಾಕಿದ ನಂತರ ಭಾನುವಾರ ನಾಗ್ಪುರ ಪೊಲೀಸರು ಮಹಲ್ ಮಾರುಕಟ್ಟೆ ಪ್ರದೇಶದಲ್ಲಿ ಧ್ವಜ ಮೆರವಣಿಗೆ ನಡೆಸಿದರು. ಸಾಮಾಜಿಕ ಮಾಧ್ಯಮಗಳ ದುರುಪಯೋಗದ ವಿರುದ್ಧ ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಅವರು ಕಠಿಣ ಎಚ್ಚರಿಕೆ ನೀಡಿ, ಹಿಂಸಾಚಾರಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಹಂಚಿಕೊಳ್ಳುವ ಮೊದಲು ಜನರು ಮರುಪರಿಶೀಲಿಸುವಂತೆ ಸಲಹೆ ನೀಡಿದರು.
‘ಈಗ ಪರಿಸ್ಥಿತಿ ಶಾಂತವಾಗಿದೆ. ಯಾವುದೇ ಸಮಸ್ಯೆ ಇಲ್ಲ ಮತ್ತು ಜನಜೀವನವು ಸಾಮಾನ್ಯ ಸ್ಥಿತಿಗೆ ಮರಳಿದೆ. ಇಲ್ಲಿಯವರೆಗೆ, 13 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, 115 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪೊಲೀಸ್ ಆಯುಕ್ತ ರವೀಂದರ್ ಸಿಂಘಾಲ್ ಹೇಳಿದರು.