ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮದ ಹಾಲು ಡೈರಿ ಬಳಿಯ ರೈಲ್ವೇ ಹಳಿಯಲ್ಲಿ ಯುವಕನೊಬ್ಬ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾರ್ಚ್ 16 ರಂದು ಸಂಜೆ ನಡೆದಿದೆ. ಮೃತ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಮಟಪಾಡಿ ಗ್ರಾಮದ ಪ್ರಶಾಂತ್ (38) ಎಂಬವರು ಬಾರ್ಕೂರು ರೈಲ್ವೇ ಗ್ಯಾಂಗ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 16 ರಂದು ಸಂಜೆ 4:15 ರ ಸುಮಾರಿಗೆ, ಚಾಂತಾರು ಗ್ರಾಮದ ಹಾಲು ಡೈರಿ ಸಮೀಪದ ರೈಲ್ವೇ ಹಳಿಯಲ್ಲಿ ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲಿಗೆ ವ್ಯಕ್ತಿಯೊಬ್ಬರು ಸಿಲುಕಿರುವ ಮಾಹಿತಿ ಅವರಿಗೆ ಲಭಿಸಿದೆ. ಕೂಡಲೇ ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ, ರೈಲ್ವೆ ಹಳಿಯಲ್ಲಿ ಸುಮಾರು 25 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಪುರುಷನ ಮೃತದೇಹ ಛಿದ್ರವಾಗಿ ಬಿದ್ದಿರುವುದು ಕಂಡುಬಂದಿದೆ. ರೈಲ್ವೆ ಕಂಬ ಸಂಖ್ಯೆ 681/6 ರ ಬಳಿ ತಲೆ ಮತ್ತು ಕೈಗಳು ಪತ್ತೆಯಾಗಿವೆ.
ಯಾವುದೋ ಕಾರಣಕ್ಕೆ ಮನನೊಂದು ಈ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಪ್ರಶಾಂತ್ ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 15/2025, ಕಲಂ 174 ಸಿಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತನ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.