ಬೆಂಗಳೂರು: ಇಡೀ ದೇಶವೇ ನಿನ್ನೆ ಬಣ್ಣ ಬಣ್ಣದ ಹೋಳಿ
ಹಬ್ಬದ ಸಂಭ್ರಮದಲ್ಲಿ ಮುಳುಗಿ ಹೋಗಿತ್ತು. ಆದರೆ ಆಂಧ್ರಪ್ರದೇಶ ಪಶ್ಚಿಮ ಗೋದಾವರಿ ಜಿಲ್ಲೆಯ ಕಾಕಿನಾಡದ ಸುಬ್ಬ ರಾವ್ ನಗರದ ಚಂದ್ರಕಿಶೋರ್ ಮನೆಯಲ್ಲಿ ಯಾರು ಊಹಿಸಲಾಗದಂತಹ ಘಟನೆ ನಡೆದಿದೆ. ಹೆತ್ತ ಮಕ್ಕಳ ಕೈ, ಕಾಲು ಕಟ್ಟಿದ ತಂದೆಯೇ ಬಕೆಟ್ ನೀರಿನಲ್ಲಿ ಮುಳುಗಿಸಿ ಜೀವ ತೆಗೆದಿದ್ದಾನೆ.
ಚಂದ್ರಕಿಶೋರ್, ಕೇಂದ್ರ ಸರ್ಕಾರದ ONGC (ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್) ಕಚೇರಿಯಲ್ಲಿ ಸಹಾಯಕ ಲೆಕ್ಕಪತ್ರಗಾರನಾಗಿದ್ದ. ಚಂದ್ರಕಿಶೋರ್ ಮೊದಲನೇ ಮಗ 1ನೇ ತರಗತಿ ಹಾಗೂ 2ನೇ ಮಗ ನಿಖಿಲ್ UKG ಓದುತ್ತಿದ್ದ. ಜೋಶಿಲ್ ಹಾಗೂ ನಿಖಿಲ್ ಇಬರನ್ನು ಕೊಂದಿರುವ ಚಂದ್ರಕಿಶೋರ್ ತಾನು ಸಾವಿಗೆ ಶರಣಾಗಿದ್ದಾನೆ.
ಕೇಂದ್ರ ಸರ್ಕಾರಿ ನೌಕರ ಚಂದ್ರಕಿಶೋರ್ ಪತ್ನಿ ತನುಜಾ, 7 ವರ್ಷದ ಮಗ ಜೋಶಿಲ್, 6 ವರ್ಷದ ಮತ್ತೊಬ್ಬ ಮಗ ನಿಖಿಲ್ ಜೊತೆ ವಾಸಿಸುತ್ತಿದ್ದ. ಚಂದ್ರಕಿಶೋರ್, ತನ್ನ ಇಬ್ಬರು ಮಕ್ಕಳ ಬಗ್ಗೆ ಅತಿಯಾದ ಕನಸು ಕಂಡಿದ್ದ ಪ್ರತಿ ಬಾರಿ ಅವರು ಪರೀಕ್ಷೆಯಲ್ಲಿ ಪಡೆಯುತ್ತಿದ್ದ ಮಾರ್ಕ್ಸ್ ಕಂಡು ಬಹಳಷ್ಟು ಅಸಮಾಧಾನಗೊಂಡಿದ್ದ. ಈ ಬಗ್ಗೆ ಹಲವು ಬಾರಿ ಮನೆಯಲ್ಲಿ ಗಲಾಟೆ ಕೂಡ ನಡೆದಿದೆ.
ತನ್ನ ಮಕ್ಕಳ ವಿಚಾರದಲ್ಲಿ ಹಲವು ಬಾರಿ ಮನೆಯಲ್ಲಿ ಗಲಾಟೆ ಮಾಡಿದ್ದ ಚಂದ್ರ ಕಿಶೋರ್, ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರಿಯಾಗಿ ಓದಿಲ್ಲ ಅಂದ್ರೆ ಆಗೋದಿಲ್ಲ. ಇವರಿಗೆ ಭವಿಷ್ಯವಿಲ್ಲ ಎಂದು ನಿರ್ಧರಿಸಿದ್ದಾನೆ. ತನ್ನ ಮಕ್ಕಳು ಸರಿಯಾಗಿ ಓದುತ್ತಿಲ್ಲ ಅನ್ನೋ ಒಂದೇ ಕಾರಣಕ್ಕೆ 7 ಹಾಗೂ 6 ವರ್ಷದ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದಾನೆ.
ವಿದ್ಯಾಭ್ಯಾಸದಲ್ಲಿ ಮಕ್ಕಳು ಹಿಂದುಳಿದಿದ್ದಾರೆ ಅನ್ನೋದು ಚಂದ್ರಕಿಶೋರ್‌ಗೆ ಅತಿ ದೊಡ್ಡ ಚಿಂತೆಯಾಗಿತ್ತು. ಸ್ಪರ್ಧಾತ್ಮಕ ಯುಗದಲ್ಲಿ ನನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಗೀಡಾಗಿ ಈ ದೃಢ ನಿರ್ಧಾರ ಮಾಡಿದ್ದಾನೆ ಎನ್ನಲಾಗಿದೆ. ಇಬ್ಬರು ಮಕ್ಕಳ ಕೈ ಕಾಲು ಕಟ್ಟಿ, ಮನೆಯಲ್ಲಿದ್ದ ಬಕೆಟ್ ನೀರಲ್ಲಿ ಮುಳುಗಿಸಿ ಕೊಂದಿದ್ದಾನೆ.
ಮಕ್ಕಳ ತಲೆ ನೀರಿನ ಬಕೆಟ್‌ಗಳಲ್ಲಿ ಮುಳುಗಿಸಿ ಜೀವ ಹೋಗಿರೋದನ್ನ ಖಚಿತಪಡಿಸಿಕೊಂಡ ಚಂದ್ರಕಿಶೋರ್ ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. ತನ್ನ ನಿರ್ಧಾರಕ್ಕೆ ಕಾರಣವೇನು ಅನ್ನೋದನ್ನ ಚಂದ್ರಕಿಶೋರ್ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ.