ಸ್ಪಂದನಾ ಫ್ರೆಂಡ್ಸ್ ಸರ್ಕಲ್ (ರಿ.) ಕುಳಾಯಿ
ದಿನಾಂಕ 14.03.2025 ಶುಕ್ರವಾರ ಮೀನ ಸಂಕ್ರಮಣದ ಶುಭದಿನದಂದು ಸ್ಪಂದನಾ ಫ್ರೆಂಡ್ಸ್ ಸರ್ಕಲ್ (ರಿ.) ಕುಳಾಯಿ ಮತ್ತು ಪುರಾತನ ಕೋಟೆದ ಬಬ್ಬು ದೈವಸ್ಥಾನದ ಸಹಭಾಗಿತ್ವದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ಬಗ್ಗುಂಡಿ ಕೆರೆಯಲ್ಲಿ ಶ್ರೀ ಬಬ್ಬು ದೈವಸ್ಥಾನದ ಪ್ರಸಾದ ಹಾಕುವುದರ ಮೂಲಕ ಸಾಂಕೇತಿಕವಾಗಿ ಬಗ್ಗುಂಡಿ ಉತ್ಸವ – ಮೀನು ಹಿಡಿಯುವ ಪದ್ಧತಿಯನ್ನು ಆಚರಿಸಲಾಯಿತು.
ಅನಾದಿ ಕಾಲದಿಂದಲೂ ಬಗ್ಗುಂಡಿ ಕೆರೆಯಲ್ಲಿ ಮೀನು ಹಿಡಿಯುತ್ತಿದ್ದ ಪದ್ಧತಿಯು ಬೈಕಂಪಾಡಿ ಕೈಗಾರಿಕಾ ಪ್ರದೇಶ ಮತ್ತು ಸುತ್ತಮುತ್ತಲಿನ ತ್ಯಾಜ್ಯಗಳು ಬಗ್ಗುಂಡಿ ಕೆರೆಯನ್ನು ಸೇರುತ್ತಿರುವುದರಿಂದ ಇತ್ತೀಚಿನ ಹಲವು ವರ್ಷಗಳಿಂದ ಈ ಮೀನು ಹಿಡಿಯುವ ಪದ್ಧತಿಯು ನಿಂತು ಹೋಗಿರುವುದು ವಿಷಾದನೀಯ. ಈ ಪದ್ಧತಿಯು ಮರುಕಳಿಸಬೇಕು, ಪವಿತ್ರ ಬಗ್ಗುಂಡಿ ಕೆರೆಯನ್ನು ಸೇರುತ್ತಿರುವ ತ್ಯಾಜ್ಯವು ನಿಲ್ಲಬೇಕು ಇದಕ್ಕಾಗಿ ಗ್ರಾಮದ ನಾಗರಿಕರ, ಸಂಘ ಸಂಸ್ಥೆಗಳ ತೀವ್ರ ಹೋರಾಟದ ಅಗತ್ಯವಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರರಾದ ಶ್ರೀಯುತ ಎಂ. ಜೆ. ಶೆಟ್ಟಿಯವರು ಸಲಹೆ ನೀಡಿದರು.
ಪುರಾತನ ಕೋಟೆದ ಬಬ್ಬು ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್ ಇವರು,
ಶ್ರೀ ವಿಷ್ಣುಮೂರ್ತಿ ದೇವರು ಮತ್ತು ಪುರಾತನ ಕೋಟೆದ ಬಬ್ಬು ಮತ್ತು ಪರಿವಾರ ದೈವಗಳ ಅನುಗ್ರಹದಿಂದ ಮುಂದಿನ ದಿನಗಳಲ್ಲಿ ಈ ಪವಿತ್ರ ಕೆರೆಯು ಸುಂದರವಾಗಿ ಅಭಿವೃದ್ದಿಗೊಂಡು ಮೀನು ಹಿಡಿಯುವ ಪದ್ಧತಿಯು ಮರುಕಳಿಸಲಿ ಎಂದರು.
ಸಂಸ್ಥೆಯ ಪ್ರಧಾನ ಸಂಚಾಲಕರಾದ ಯಜ್ಞೇಶ್ ಐತಾಳ್ ಮತ್ತು ಮಾಜಿ ಅಧ್ಯಕ್ಷರಾದ ಬಿ. ಬಿ. ರೈಯವರು ಸಾಂದರ್ಭಿಕವಾಗಿ ಮಾತನಾಡಿ ಕೆರೆಗೆ ಹರಿಯುತ್ತಿರುವ ತ್ಯಾಜ್ಯವನ್ನು ನಿಲ್ಲಿಸಲು ಸೂಕ್ತ ಕ್ರಮಕ್ಕಾಗಿ ಪ್ರಯತ್ನಿಸಬೇಕು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು, ಕೆರೆ ಅಭಿವೃದ್ದಿಗೊಂಡು ಮೀನು ಹಿಡಿಯುವ ಪದ್ದತಿ ಮುಂದುವರಿಯಬೇಕು ಎಂದು ಶುಭ ಹಾರೈಸಿದರು.
ಸಂಸ್ಥೆಯ ಅಧ್ಯಕ್ಷರಾದ ದೀಪಕ್ ಕುಳಾಯಿ ಇವರು ನೆರೆದ ಸರ್ವರನ್ನು ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಕೆರೆ ಅಭಿವೃದ್ದಿ ಬಗ್ಗೆ ಕೈಗೊಳ್ಳುವ ನಿರ್ಧಾರಗಳಿಗೆ ಸರ್ವ ನಾಗರಿಕರ, ಸಂಘ ಸಂಸ್ಥೆಗಳ ಬೆಂಬಲ ಯಾಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ನಾಗರಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಾತನ ಕೋಟೆದ ಬಬ್ಬು ದೈವಸ್ಥಾನದ ಪದಾಧಿಕಾರಿಗಳು, ಸ್ಪಂದನಾ ಫ್ರೆಂಡ್ಸ್ ಸರ್ಕಲ್ ಇದರ ಸರ್ವ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.