ಬೆಳ್ತಂಗಡಿ : ಫೇಸ್‌ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಲೆತ್ನಿಸಿದ ಪ್ರಕರಣ ವರದಿಯಾಗಿದ್ದು, ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ವರದಿಯಾಗಿದೆ.
ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನಿವಾಸಿಯಾಗಿರುವ ಕಾಲೇಜು ವಿದ್ಯಾರ್ಥಿಯೋರ್ವನ ಫೇಸ್‌ಬುಕ್ ಸಂಪರ್ಕದಲ್ಲಿದ್ದ ಮಹಿಳೆಯೋರ್ವಳು ಆತ್ಮೀಯತೆಯನ್ನು ಮೂಡಿಸಿ ವಿದ್ಯಾರ್ಥಿಗೆ ವೀಡಿಯೊ ಕರೆ ಮಾಡಿದ್ದಳು. ಕರೆ ಸ್ವೀಕರಿಸಿದ ವಿದ್ಯಾರ್ಥಿಗೆ ತನ್ನ ನಗ್ನ ದೇಹವನ್ನು ಕಾಣಿಸಿ ಆತನ ಭಾವನೆಯನ್ನು ಕೆರಳಿಸಲು ಯತ್ನಿಸಿದ್ದಾಳೆ.
ಬಳಿಕ ವೀಡಿಯೊ ಕರೆಯಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿಯ ಮುಖವನ್ನು ಬಳಸಿ ಅಶ್ಲೀಲ ವೀಡಿಯೊಗೆ ಎಡಿಟ್ ಮಾಡಿ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೇರೊಬ್ಬ ವ್ಯಕ್ತಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆಯನ್ನು ಈತನ ಮುಂದಿರಿಸಿದ್ದಾನೆ.
ಈ ವಿದ್ಯಮಾನದಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಯು ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಯೋರ್ವರ ಗಮನಕ್ಕೆ ತಂದಿದ್ದು, ಅವರು ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಾಗೂ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿಯನ್ನು ತಕ್ಷಣವೇ ರವಾನಿಸಲು ಸಲಹೆ ನೀಡಿದರು. ಈ ಮಧ್ಯೆ ಸಂಬಂಧಪಟ್ಟ ಖಾತೆಗಳನ್ನು ಬ್ಲಾಕ್ ಮಾಡುವ ಸಲಹೆಗಳನ್ನು ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಗಳು ನೀಡಿದರು.
ಪೊಲೀಸ್ ಇಲಾಖೆಯ ಗಮನಕ್ಕೆ ತಮ್ಮ ಕೃತ್ಯದ ಬಗ್ಗೆ ಮಾಹಿತಿ ಲಭಿಸಿದೆ ಎಂಬ ಸುಳಿವು ಸಿಕ್ಕಾಕ್ಷಣ ವಿದ್ಯಾರ್ಥಿಯನ್ನು ಬೆದರಿಸುವ ಕಾರ್ಯದಿಂದ ವಿಮುಖವಾದ ತಂಡ ಬಳಸಿದ ಮೂರು ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದೆ. ಅಲ್ಲದೆ ಬೆದರಿಕೆಗೆ ತುತ್ತಾದ ವಿದ್ಯಾರ್ಥಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ಲಾಕ್ ಮಾಡಿದೆ. ತಮಗೆ ತಿಳಿಯದಂತೆ ವೀಡಿಯೊ ಕರೆ ಸ್ವೀಕರಿಸಿದ ಮಾತ್ರಕ್ಕೆ ತಮ್ಮ ಅಶ್ಲೀಲ ವೀಡಿಯೊವೊಂದು ಸಿದ್ಧವಾಗಿ ಅದನ್ನು ತಮ್ಮ ಮಾನಹಾನಿಗೆ ಬಳಸುವ ಬೆದರಿಕೆಯೊಡ್ಡುವ, ಆ ಮೂಲಕ ಹಣಕ್ಕಾಗಿ ಪೀಡಿಸುವ ಜಾಲಗಳು ಸಕ್ರೀಯವಾಗಿದ್ದು, ಈ ಜಾಲಕ್ಕೆ ಸಿಲುಕಿದರೂ ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಸಹಾಯ ಸಂಖ್ಯೆ 1930ಕ್ಕೆ ಸಂಪರ್ಕಿಸಿ ಸಹಾಯ ಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.
Attempt to extort money from student through obscene video.
A case where a woman in Facebook group of friends honeytrapped a teenage student and tried to blackmail him for money.