ಉಡುಪಿ : ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣದ ಮೂವರು ಆರೋಪಿಗಳನ್ನು ಕಾರ್ಕಳ ಪೊಲೀಸರು ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ಸೆ.24ರಂದು ಬಂಧಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಸೋಲಾಪುರ ತಾಲೂಕಿನ ಶ್ರವಣ್ ಸತೀಶ ಮಿನಜಗಿ (27), ಪುದೀಪ ಮಾರುತಿ ಇಂಗ್ಲೆ(27) ಹಾಗೂ ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ಕಿರಣ್ ಬಾಲು ಚೌಹಾನ್(28) ಬಂಧಿತ ಆರೋಪಿಗಳು.
ಇವರಿಂದ ಕೃತ್ಯಕ್ಕೆ ಬಳಸಿದ 4 ಲಕ್ಷ ರೂ. ಮೌಲ್ಯದ ಕಾರು, 70,000 ರೂ. ನಗದು, ಮೂರು ಮೊಬೈಲ್ ಫೋನ್‌ಗಳು ಹಾಗೂ ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 4,85,000ರೂ. ಎಂದು ಅಂದಾಜಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸೆ.16ರಂದು ಸಂಜೆ ಅಜೆಕಾರು ಪೇಟೆಯಲ್ಲಿರುವ ಎಟಿಎಂನಲ್ಲಿ ಬೊಂಡುಕುಮೇರಿ ನಿವಾಸಿ ಹನಿ ಡಿಸೋಜ ಎಂಬವರ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ಅವರ ಎಟಿಎಂ ಕಾರ್ಡನ್ನು ಬದಲಾವಣೆ ಮಾಡಿ ಅದರಿಂದ ಒಂದು ಲಕ್ಷ ರೂ. ಡ್ರಾ ಮಾಡಿ ಮೋಸ ಮಾಡಿರುವುದಾಗಿ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದಲ್ಲಿ ಒಟ್ಟು ನಾಲ್ಕು ಮಂದಿ ಆರೋಪಿಗಳು ಭಾಗಿಯಾಗಿದ್ದು, ಇವರು, ಬೇರೆ ಬೇರೆ ರಾಜ್ಯಗಳಲ್ಲಿ ಸಂಚರಿಸುತ್ತ ಎಟಿಎಂನಲ್ಲಿ ಹಣ ತೆಗೆಯಲು ಬಂದ ಜನರ ಗಮನವನ್ನು ಬೇರೆಡೆ ಸೆಳೆದು ಅವರ ಎಟಿಎಂ ಕಾರ್ಡ್‌ನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್ ನೀಡಿ, ಬಳಿಕ ಬೇರೆ ಎಟಿಎಮ್ ನಲ್ಲಿ ಈವರೆಗೆ ಲಕ್ಷಾಂತರ ಹಣವನ್ನು ಡ್ರಾ ಮಾಡಿದ್ದಾರೆ.
ಇವರ ವಿರುದ್ಧ ಈ ತನಕ ಇದೇ ರೀತಿಯ ಸುಮಾರು 70ಕ್ಕೂ ಹೆಚ್ಚು ಪ್ರಕರಣ ದಾಖಲಾಗಿರುವುದು ಹಾಗೂ ಹಲವು ಪ್ರಕರಣದಲ್ಲಿ ಜೈಲು ಶಿಕ್ಷೆ ಆಗಿರುವುದು ಪ್ರಾಥಮಿಕ ತನಿಖೆ ಯಿಂದ ತಿಳಿದುಬಂದಿದೆ.
ಉಡುಪಿ ಎಸ್ಪಿ ಅರುಣ್ ಕೆ., ಹೆಚ್ಚುವರಿ ಎಸ್ಪಿಗಳಾದ ಸಿದ್ದಲಿಂಗಪ್ಪ ಎಸ್.ಟಿ, ಪರಮೇಶ್ವರ ಹೆಗಡೆ ನಿರ್ದೇಶನದಂತೆ ಕಾರ್ಕಳ ಡಿವೈಎಸ್‌ಪಿ ಅರವಿಂದ ಎನ್ ಕಲ್ಲಗುಜ್ಜಿ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪಡಿ.ಆರ್, ಎಸ್ಸೈ ರವಿ ಬಿ.ಕೆ ನೇತೃತ್ವದಲ್ಲಿ ಅಜೆಕಾರು ಠಾಣಾ ಎಸ್ಸೈ ಶುಭಕರ ಮತ್ತು ಸಿಬ್ಬಂದಿ ಸತೀಶ ಬೆಳ್ಳಿ, ಪ್ರದೀಪ ಶೆಟ್ಟಿ, ನಾಗೇಶ, ಪ್ರವೀಣ ಕುಮಾರ್, ಬಸವರಾಜ ಭದ್ರ ಶೆಟ್ಟಿ, ಶಶಿಕಲಾ, ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ನಿತಿನ್ ಹಾಗೂ ದಿನೇಶ ಈ ಕಾರ್ಯಾಚರಣೆ ನಡೆಸಿದ್ದಾರೆ.