
ಅಮೆರಿಕಾದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಟ್ಟಕ್ಕೇರಿದ ಕೂಡಲೇ ಅಲ್ಲಿ ನೆಲೆಸಿದ್ದ ಭಾರತೀಯರನ್ನು ಬೆಚ್ಚಿ ಬೀಳಿಸಿದ್ದಾರೆ. ಅಧಿಕಾರಕ್ಕೇರಿದ ಕೂಡಲೇ ಟ್ರಂಪ್ ಹಾಕಿದ ಹೊಸ ಆದೇಶದ ಸಹಿಗೆ ಅನಿವಾಸಿ ಭಾರತೀಯರು ಶಾಕ್ ಆಗಿದ್ದಾರೆ. ಪೌರತ್ವ ನೀತಿಯ ಬದಲಾವಣೆಯಿಂದ ಅನಿವಾಸಿ ಭಾರತೀಯ ತಾಯಂದಿರು ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.
ಅಮೆರಿಕಾದಲ್ಲಿ ಜನಿಸಿದ ಮಕ್ಕಳಿಗೆ ಜನ್ಮಸಿದ್ಧ ಪೌರತ್ವ ನೀಡಲಾಗುತ್ತಿತ್ತು. ಇದರ ಅನ್ವಯ ಅಮೆರಿಕಾದಲ್ಲಿದ್ದ ಅನಿವಾಸಿ ಭಾರತೀಯರಿಗೆ ಜನಿಸಿದ ಮಕ್ಕಳಿಗೆ ಅಮೆರಿಕಾ ಪೌರತ್ವ ಸಿಗುತ್ತಿತ್ತು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಟ್ರಂಪ್ ಜನ್ಮಸಿದ್ಧ ಪೌರತ್ವ ನೀತಿಯನ್ನೇ ರದ್ದು ಮಾಡುವುದಾಗಿ ಹೇಳಿ ಆದೇಶಕ್ಕೆ ಸಹಿ ಮಾಡಿದ್ರು.
ಇದೇ ಫೆಬ್ರವರಿ 20ಕ್ಕೆ ಈ ಜನ್ಮಸಿದ್ಧ ಪೌರತ್ವ ನೀತಿ ರದ್ದಾಗಲಿದೆ. ಅದಕ್ಕೂ ಮುಂಚೆಯೇ ಮಕ್ಕಳನ್ನ ಹಡೆದು ಬಿಟ್ಟರೇ ಅಮೆರಿಕಾ ಪೌರತ್ವ ಸಿಗುತ್ತದೆ ಅನ್ನುವ ಕಾರಣಕ್ಕೆ ಅಲ್ಲಿ ನೆಲೆಸಿರುವ ಭಾರತೀಯ ತಾಯಂದಿರು ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ ಎಂದು ಪಿಟಿಐ ವರದಿ ಪ್ರಕಟಿಸಿದೆ.
ಮಾರ್ಚ್‌ನಲ್ಲಿ ಹೆರಿಗೆ ಇದ್ದರೂ ಹಲವಾರು ತಾಯಂದಿರು ಅವಧಿ ಪೂರ್ವ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ ಎಂದು ನ್ಯೂಜರ್ಸಿಯ ಮೆಟರ್ನಿಟಿ ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜನ್ಮಸಿದ್ಧ ಪೌರತ್ವ ನೀತಿ ರದ್ದಾಗುವ ಮುನ್ನ ಎಂದರೇ ಫೆಬ್ರವರಿ 20ಕ್ಕೂ ಮುಂಚೆಯೇ ಸಿಸೇರಿಯನ್ ಹೆರಿಗೆ ಮಾಡಿಸಿಕೊಳ್ಳುವುದಕ್ಕೆ ಅನಿವಾಸಿ ಭಾರತೀಯ ದಂಪತಿಗಳು ಕ್ಯೂ ಕಟ್ಟಿ ನಿಂತಿದ್ದಾರೆ. ಈ ಬೆಳವಣಿಗೆಯನ್ನು ಕಂಡು ಅಮೆರಿಕಾದ ವೈದ್ಯರು ಅಕ್ಷರಶಃ ಕಂಗಾಲಾಗಿದ್ದಾರೆ.
ಒಂಬತ್ತು ತಿಂಗಳು ಮುಗಿಯೋದಕ್ಕೂ ಮುನ್ನವೇ ಭಾರತೀಯ ತಾಯಂದಿರು ಸಿ ಸೆಕ್ಷನ್ ಹೆರಿಗೆ ಮಾಡಿಸಿಕೊಳ್ಳೋದ್ರಿಂದಾಗಿ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು. ಇಂಥಾ ಹೆರಿಗೆಯಿಂದಾಗಿ ತಾಯಿ ಮಗುವಿನ ಆರೋಗ್ಯದಲ್ಲಿ ಬಹುದೊಡ್ಡ ಸಮಸ್ಯೆ ಬರುವ ಸಾಧ್ಯತೆಯೂ ಇದೆ. ಇದೇ ಆತಂಕವೇ ವೈದ್ಯರನ್ನೂ ಕಂಗೆಡಿಸುತ್ತಿದೆ.