
ಉತ್ತರ ಭಾರತ ಮೂಲದ ಮೂವರು ಯುವಕರು ಎಟಿಎಂಗಳಿಗೆ ಬರುತ್ತಿದ್ದ ಅಮಾಯಕರ ವೃದ್ಧರನ್ನು ಯಾಮಾರಿಸುತ್ತಿದ್ದರು. ರಜೀಬ್, ಸುಭಾಂಸು ಮತ್ತು ನಯಾಜ್ ಕೆಲ ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದರು. ಮೈ ಬಗ್ಗಿಸಿ ದುಡಿಯುವುದನ್ನು ಮರೆತಿದ್ದ ಈ ಮೂವರು ಫ್ರೆಜರ್ ಟೌನ್, ಶಿವಾಜಿನಗರ ಸುತ್ತಮುತ್ತಲ ನಿರ್ಜನ ಎಟಿಎಂಗಳ ಬಳಿಯೇ ಸುತ್ತಾಡುತ್ತಿದ್ದರು. ಬಳಿಕ ಅಲ್ಲಿಗೆ ಬರುತ್ತಿದ್ದ ವೃದ್ಧರನ್ನೇ ವಂಚಿಸುತ್ತಿದ್ದರು.
ಎಟಿಎಂಗಳಿಗೆ ಬರುವ ವೃದ್ಧರಿಗೆ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಹೋಗುತ್ತಿದ್ದರು. ಹಣ ವಿತ್ಡ್ರಾ ಮಾಡಿಕೊಡುತ್ತೇವೆ ಎಂದು ಅಸಲಿ ಎಟಿಎಂ ಕಾರ್ಡ್ ಪಡೆದುಕೊಳ್ಳುತ್ತಿದ್ದರು. ಆದರೆತ ಮ್ಮಬಳಿ ಇದ್ದ ನಕಲಿ ಕಾರ್ಡ್ ಹಾಕಿ ಕಾರ್ಡ್ ಸರಿ ಇಲ್ಲ ಎನ್ನುತ್ತಿದ್ದರು. ವೃದ್ಧರು ಹೋದ ಬಳಿಕ ಎಟಿಎಂ ಪಿನ್ ಬಳಸಿ ಹಣ ಡ್ರಾ ಮಾಡುತ್ತಿದ್ದರು. ಅದೇರೀತಿಎಟಿಎಂನಲ್ಲಿ ಹಣ ಹೊರಬರುವ ಜಾಗವನ್ನು ಬ್ಲಾಕ್ ಮಾಡಿ ಹೊಂಚುಹಾಕುತ್ತಿದ್ದರು. ಹಣ ಡ್ರಾ ಮಾಡಿದವರಿಗೆ ಹಣ ಸಿಗದೆ ಅವರು ಅಲ್ಲಿಂದ ಹೋದ ಬಳಿಕ ಅ ಹಣ ಪಡೆಯುತ್ತಿದ್ದರು.
ಸಿನಿಮೀಯವಾಗಿ ಎಟಿಎಂ ಹಣ ಹಾಗೂ ಎಟಿಎಂಗೆ ಬರುವ ವೃದ್ಧರಿಂದ ಹಣ ಕಸಿಯುತ್ತಿದ್ದ ಈ ಆಸಾಮಿಗಳನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ ಒಳಗಾದ ವೃದ್ದರೊಬ್ಬರು ಪುಲಕೇಶಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಆರೋಪಿಗಳ ಗುರುತು ಪತ್ತೆ ಹಚ್ಚಿದ ಪೊಲೀಸರು, ಮೂವರನ್ನೂ ಹೆಡೆಮುರಿ ಕಟ್ಟಿದ್ದಾರೆ. ಏನೇ ಇರಲಿ, ಒಟ್ಟಿನಲ್ಲಿ ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ಮುನ್ನ ಆದಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು.