
ಮೂಡಬಿದ್ರೆ : ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಗೂಡಂಗಡಿಗೆ ನುಗ್ಗಿದ ಕಳ್ಳರು ಹಣ ಹಾಗೂ ಸುಮಾರು ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಗಳನ್ನು ನೀಡ್ಡೋಡಿ ನಿವಾಸಿ ರೋಷನ್ ವಿಲ್ಸನ್ ಕ್ವಾಡ್ರಸ್, ಕೊಂಪಪದವು ಸಾಂತ್ರಬೈಲ್ ನಿವಾಸಿ ನಿಶಾಂಕ್ ಪೂಜಾರಿ, ತೆಂಕ ಎಕ್ಕಾರು ನಿರೋಡೆ ನಿವಾಸಿ ರೋಹಿತ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ.
ಈ ಮೂವರು ಕಳ್ಳರು ಪುತ್ತಿಗೆ ಗ್ರಾಮದ ಮುಲ್ಕಿ ಕ್ರಾಸ್ ಎಂಬಲ್ಲಿರುವ ಜಯಶ್ರೀ ಸ್ಟೊರ‍್ಸ್ ಎಂಬ ಗೂಡಂಗಡಿಗೆ ಜನವರಿ 9ರಂದು ರಾತ್ರಿ ಮೇಲ್ಮಾವಣಿಯ ಸೀಟ್ ನ್ನು ತೆಗೆದು, ಬೀಗವನ್ನು ಒಡೆದು ಅಂಗಡಿಯಲ್ಲಿದ್ದ ಸುಮಾರು 20000 ರೂ ನಗದು ಮತ್ತು, ಸುಮಾರು 48000 ರೂ ಮೌಲ್ಯದ ಸಿಗರೇಟು, ತಿಂಡಿ, ನೀರು ಬಾಟಲ್, ಕೊಲ್ಡ್ ಡ್ರಿಂಕ್ಸ್, ಚಾಕೊಲೇಟ್, ಮಿಕ್ಸರ್, ಬಿಸ್ಕೆಟ್ ಇತ್ಯಾದಿ ವಸ್ತುಗಳನ್ನು ದೋಚಿದ್ದರು. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳು ಮುಲ್ಕಿ, ಬಜಪೆ, ಕಾರ್ಕಳ ಮತ್ತು ವೇಣೂರು ಠಾಣಾ ವ್ಯಾಪ್ತಿಯಲ್ಲಿ ಸುಮಾರು 3 ವರ್ಷಗಳಿಂದ 25 ಕ್ಕೂ ಹೆಚ್ಚು ಗೂಡಂಗಡಿಗಳಿಗೆ ನುಗ್ಗಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೃತ್ಯಕ್ಕೆ ಬಳಸಿದ ಕಾರು, ಸ್ಕೂಟರ್ ಮತ್ತು, 5000 ಹಣವನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ, 3.55,000 ಎನ್ನಲಾಗಿದೆ.
ಈ ಪ್ರಕರಣದಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರ್ವಾಲ್ ರವರ ಮಾರ್ಗದರ್ಶನದಂತೆ, ಡಿಸಿಪಿ ಸಿದ್ಧಾರ್ಥ ಗೊಯಲ್, ಡಿಸಿಪಿ ರವಿಶಂಕರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಮಾನ ಎಸಿಪಿ ಶ್ರೀಕಾಂತ್ ಕೆ ರವರ ನಿರ್ದೇಶನದಂತೆ ಕಾರ್ಯಚರಣೆಯಲ್ಲಿ ಮೂಡಬಿದ್ರೆ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೇಶ್ ಪಿ.ಜಿ ರವರ ನೇತೃತ್ವದ ತಂಡ ನವೀಸ್ ಪಿ.ಎಸ್.ಐ, ರಾಜೇಶ್ ಎ ಎಸ್ ಐ ಮತ್ತು ಠಾಣಾ ಅಪರಾಧ ವಿಭಾಗದ ಸಿಬ್ಬಂಧಿಯವರಾದ ಮೊಹಮ್ಮದ್ ಇಕ್ಬಾಲ್, ಮೊಹಮ್ಮದ್ ಹುಸೈನ್ ಅಕೀಲ್ ಅಹಮ್ಮದ್, ನಾಗರಾಜ್, ಪ್ರದೀಪ್, ವೆಂಕಟೇಶ್, ಸತೀಶ್ ಮತ್ತು ರಾಜೇಶ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.