
ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (UCC) ಕುರಿತಾಗಿ ಪರ, ವಿರೋಧಗಳು ಚರ್ಚೆ ನಡೆಯುತ್ತಿದೆ. ಈ ನಡುವೆ ಉತ್ತರಾಖಂಡ್ನ ಬಿಜೆಪಿ ಸರ್ಕಾರ ಮಹತ್ವದ ಹೆಜ್ಜೆ ಇರಿಸಿದೆ. ಇಂದಿನಿಂದ ಉತ್ತರಾಖಂಡ್ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಲಿದೆ. ಆ ಮೂಲಕ ಯುಸಿಸಿ ಜಾರಿಗೊಳಿಸಿದ ಮೊದಲ ರಾಜ್ಯ ಎನಿಸಲಿದೆ ಉತ್ತರಾಖಂಡ್.
ನಾಳೆ ಉತ್ತರಾಖಂಡ್ಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ. ಮೋದಿ ಭೇಟಿಗೂ ಮುನ್ನ ಯುಸಿಸಿ (ಏಕರೂಪ ನಾಗರಿಕ ಸಂಹಿತೆ) ಜಾರಿಗೊಳಿಸಿ ಮೋದಿಗೆ ಗಿಫ್ಟ್ ಕೊಡಲು ನಿರ್ಧರಿಸಿದೆ.
ಯುಸಿಸಿ ಜಾರಿ ಬಗ್ಗೆ ಉತ್ತರಾಖಂಡ್ ಗೃಹ ಕಾರ್ಯದರ್ಶಿ ಶೈಲೇಶ್ ಬಾಗೋಲಿ ಘೋಷಣೆ ಮಾಡಿದ್ದಾರೆ. ಯುಸಿಸಿ ಉತ್ತರಾಖಂಡ್ನಲ್ಲಿ ಜಾರಿಗೊಳಿಸುತ್ತೇವೆ ಅಂದಿದ್ದಾರೆ. ರಾಜ್ಯದ ಹೊರಗೆ ವಾಸಿಸುವ ನಿವಾಸಿಗಳಿಗೂ ಯುಸಿಸಿ ವ್ಯಾಪ್ತಿ ವಿಸ್ತರಿಸುವುದಾಗಿ ಹೇಳಿದ್ದಾರೆ.
ಸಿಎಂ ಪುಷ್ಕರ್ ಸಿಂಗ್ ಧಾಮಿ ಯುಸಿಸಿ ಪೋರ್ಟಲ್ಗೆ ಚಾಲನೆ ನೀಡಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಯುಸಿಸಿ ಪೋರ್ಟಲ್ ಅನಾವರಣಗೊಳಿಸುವ ಮೂಲಕ UCC ಜಾರಿ ಬಗ್ಗೆ ಅಧಿಸೂಚನೆ ಹೊರಡಿಸುತ್ತಾರೆ. ಸಮಾಜದಲ್ಲಿ ಯುಸಿಸಿ ಏಕರೂಪತೆಯನ್ನು ತರಲಿದೆ ಅಂತ ಸಿಎಂ ಧಾಮಿ ಹೇಳಿದ್ದಾರೆ. ಇದು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕು ಮತ್ತು ಜವಾಬ್ದಾರಿ ಖಚಿತಪಡಿಸುತ್ತದೆ ಅಂತ ಧಾಮಿ ಹೇಳಿದ್ದಾರೆ.
ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಉತ್ತರಾಧಿಕಾರವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳಲ್ಲಿ ಏಕರೂಪತೆಗೆ ಯುಸಿಸಿ ದಾರಿ ತೋರಿಸಲಿದೆ. UCC ಕೋಡ್ ಅಡಿಯಲ್ಲಿ ವೈವಾಹಿಕ ಪರಿಸ್ಥಿತಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗುತ್ತದೆ. ಪ್ರಮುಖವಾಗಿ ಯುಸಿಸಿ ಇಡೀ ರಾಜ್ಯಕ್ಕೆ ಅನ್ವಯಿಸಿದ್ದರೂ ಪರಿಶಿಷ್ಟ ಪಂಗಡ(ಎಸ್ಟಿ) ಮತ್ತು ಕೆಲವು ಸಂರಕ್ಷಿತ ಸಮುದಾಯಗಳಿಗೆ ವಿನಾಯ್ತು ಇರಲಿದೆ.