ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ತೇಜಸ್ವಿ ಸೂರ್ಯ ವಿವಾಹ ಈಗ ಬಹುತೇಕ ಸನ್ನಿಹಿತವಾಗಿದೆ. ತೇಜಸ್ವಿ ಅವರು ಸಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ಹಸೆಮಣೆ ಏರುವುದು ನಿಶ್ಚಯವಾಗಿದೆ. ಈ ಬಗ್ಗೆ ಜೋಡಿ ಅಧೀಕೃತ ಮಾಹಿತಿ ನೀಡದೇ ಇದ್ದರೂ, ಮದುವೆ ದೃಢ ಎಂಬ ಮಾತುಗಳು ಕೇಳಿಬರುತ್ತಿದೆ.
ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮ ಭಾವಿಪತ್ನಿ ಸಿವಶ್ರೀ ಸ್ಕಂದ ಪ್ರಸಾದ್ ಜೊತೆ ಸೇರಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಹೊರ ಹೊಲಯದಲ್ಲಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಜೊತೆಯಾಗಿ ಆಗಮಿಸಿದ್ದಾರೆ. ಈ ವೇಳೆ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಬಿಜೆಪಿಯ ಯುವ ಸಂಸದರಾದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಗಾಯಕಿ, ನಟಿ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ವಿವಾಹವಾಗಲಿದ್ದಾರೆ ಎಂದು ಇತ್ತೀಚೆಗಷ್ಟೇ ಹೇಳಲಾಗಿತ್ತು. ಇದರ ಬೆನ್ನಲ್ಲೇ ಇಬ್ಬರು ನಗರದ ಹೊರ ಹೊಲಯದಲ್ಲಿರುವ ಆರ್ಟ್ ಆಫ್ ಲಿವಿಂಗ್? ಆಶ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ವಿಶೇಷ ಎನಿಸಿತು.
ಸಿವಶ್ರೀ ಸ್ಕಂದ ಪ್ರಸಾದ್ ಅವರು ಗಾಯಕಿ ಆಗಿದ್ದು ಹಾಡುಗಳನ್ನು ಉತ್ತಮವಾಗಿ ಹಾಡುತ್ತಾರೆ. ಇದರ ಜೊತೆಗೆ ಹರಿಕಥೆ, ಭಜನೆ, ಸೈಕ್ಲಿಂಗ್, ವಾಕ್‌ಥಾನ್ ಮೂಲಕ ಕಾರ್ಯಕ್ರಮದಲ್ಲಿ ನರೆದ ಎಲ್ಲರ ಗಮನ ಸೆಳೆಯಬಲ್ಲರು. ಇದರ ಜೊತೆ ಈ ಯುವ ಜೋಡಿಯ ವಿವಾಹ ಸಮಾರಂಭವು 2025ರ ಮಾರ್ಚ್ 4 ರಂದು ನಿಶ್ಚಯವಾಗಿದೆ.