Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತ

ಪುತ್ತೂರು: ನಾಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಕಾಡಿನಲ್ಲಿ ಪತ್ತೆ.!

ಪುತ್ತೂರು : ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬರ ತಲೆ ಬುರುಡೆ ಹಾಗೂ ಎಲುಬುಗಳು ಒಳಮೊಗ್ರು ಗ್ರಾಮದ ಉರ್ವದಲ್ಲಿ ಪತ್ತೆಯಾಗಿದೆ.

ಮೃತರನ್ನು ಉರ್ವ ನಿವಾಸಿ ಸಂಜೀವ ಎಂಬವರ ಪತ್ನಿ ನಳಿನಿ ಎಂದು ಗುರುತಿಸಲಾಗಿದೆ. ಇವರು ತಮ್ಮ ಮನೆಯ ಎದುರಿನ ಕಾಡೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಇದು ಮನೆಯವರಿಗೆ ಒಂದು ತಿಂಗಳ ಬಳಿಕ ಗೊತ್ತಾಗಿದೆ.

ಉರ್ವ ನಿವಾಸಿ ಸಂಜೀವ ಎಂಬವರು ಕನ್ಯಾನದಿಂದ ನಳಿನಿ ಎಂಬವರನ್ನು ಒಂದೂವರೆ ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಂಡಿದ್ದರು. ನಳಿನಿಯವರು ಆಗಾಗ ತನ್ನ ತಾಯಿ ಮನೆಗೆ ಹೋಗುತ್ತಿದ್ದರು ಎಂದು ಹೇಳಲಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾಗಿದ್ದರು.

ಈ ಬಗ್ಗೆ ಸಂಜೀವರವರು ಅಕ್ಟೋಬರ್ 8ರಂದು ಸಂಪ್ಯ ಪೊಲೀಸ್‌ ಠಾಣೆಗೆ ತೆರಳಿ ತನ್ನ ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿಸಿದ್ದರು. ಪತ್ನಿಯ ಫೋಟೋ ತರುವಂತೆ ಠಾಣೆಯಲ್ಲಿ ತಿಳಿಸಿದ್ದರು. ಆದರೆ ಆ ಬಳಿಕ ಸಂಜೀವರವರು ಠಾಣೆಗೆ ತೆರಳಿ ದೂರು ನೀಡಿರಲಿಲ್ಲ ಎಂದು ಹೇಳಲಾಗಿದೆ.

ನಳಿನಿಯವರು ತನ್ನ ತವರು ಮನೆಗೂ ಹೋಗದೇ ನಾಪತ್ತೆಯಾಗಿರುವ ವಿಷಯ ತಿಳಿದು ತವರು ಮನೆಯವರು ಉರ್ವದ ಸಂಜೀವರವರ ಮನೆಯ ಸುತ್ತಮುತ್ತ ನವೆಂಬರ್ 2ರಂದು ಸಂಜೆ ಬಂದು ಹುಡುಕಾಡಿದ್ದಾರೆ.

ಈ ವೇಳೆ ಮನೆಯ ಎದುರಿನ ಗುಡ್ಡದ ತುದಿಯಲ್ಲಿ ಮರವೊಂದಕ್ಕೆ ನೇಣು ಹಾಕಿದ ಸ್ಥಿತಿಯಲ್ಲಿ ಹಗ್ಗ ಇದ್ದು ಹಗ್ಗದಲ್ಲಿ ತಲೆ ಕೂದಲು ಪತ್ತೆಯಾಗಿದೆ. ಹಗ್ಗದ ಕೆಳಗೆ ತಲೆ ಬುರುಡೆ ಹಾಗೂ ಕೈ ಮತ್ತು ಕಾಲಿನ ಎಲುಬುಗಳು ಪತ್ತೆಯಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

Leave a Comment