ಪ್ರವಾಸಿಗರ ಆಕರ್ಷಣೆಯ ತಾಣವಾಗಿರುವ ಮಲ್ಪೆ ಸೈಂಟ್ ಮೇರೀಸ್ ದ್ವೀಪಕ್ಕೆ ಮಳೆಗಾಲದಲ್ಲಿ 4 ತಿಂಗಳ ಕಾಲ ಹೇರಲಾಗಿದ್ದ ಪ್ರವೇಶ ನಿರ್ಬಂಧ ಅವಧಿ ತೆರವಾಗಿದ್ದು, ಸೆ. 15ರಿಂದ ಮತ್ತೆ ದ್ವೀಪ ಯಾನ ಆರಂಭಗೊಳ್ಳುತ್ತಿದೆ.
ದಡದಿಂದ 4-5 ಕಿ.ಮೀ. ದೂರದಲ್ಲಿರುವ ದ್ವೀಪಕ್ಕೆ ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ ಎಂದು ಪ್ರತಿವರ್ಷ ಮೇ 15ರಿಂದ ಸೆ. 14ರ ವರೆಗೆ ಇಲ್ಲಿನ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರುತ್ತದೆ.
ಮಲ್ಪೆ ಬೀಚ್ ಮತ್ತು ಮೀನುಗಾರಿಕೆ ಬಂದರಿನ ಪಶ್ಚಿಮ ಭಾಗದಲ್ಲಿ ದ್ವೀಪಕ್ಕೆ ದೊಡ್ಡ ಪ್ರವಾಸಿ ಬೋಟ್‌ನ ವ್ಯವಸ್ಥೆ ಇದೆ. ಮಲ್ಪೆ ಬೀಚ್‌ನಿಂದ ದ್ವೀಪಕ್ಕೆ ಹೋಗಲು ಪ್ರವಾಸಿ ಸ್ಪೀಡ್ ಬೋಟುಗಳೂ ಇವೆ.
ನಾಲ್ಕೈದು ತಿಂಗಳು ಸ್ತಬ್ಧವಾಗಿದ್ದ ದ್ವೀಪದಲ್ಲಿ ಗಿಡಗಂಟಿಗಳು ಎತ್ತರಕ್ಕೆ ಬೆಳೆದು ನಿಂತಿದ್ದು, ಅದನ್ನು ತೆರವುಗೊಳಿಸುವ ಕೆಲಸ ನಡೆಸಲಾಗುತ್ತಿದೆ. ದ್ವೀಪದ ಸುತ್ತಲೂ ತ್ಯಾಜ್ಯಗಳು ಸಂಗ್ರಹವಾಗಿದ್ದು, 12 ಕಟ್ಟಿಂಗ್ ಮೆಶಿನ್ ಮೂಲಕ ರವಿವಾರದಿಂದ ಸ್ವಚ್ಛತಾ ಕೆಲಸ ಮಾಡಲಾಗಿದೆ.
ಯಾನಕ್ಕೆ ಸಿದ್ಧವಾಗಿರುವ ಸೀವಾಕ್ ಬಳಿಯ ನಾಲ್ಕೂ ದೊಡ್ಡ ಬೋಟುಗಳನ್ನು ಪರಿಶೀಲಿಸಲಾಗಿದೆ. ವಾತಾವರಣ, ನೀರಿನ ಒತ್ತಡವನ್ನು ನೋಡಿಕೊಂಡು ಯಾನ ಆರಂಭಿಸಲು ತಿಳಿಸಲಾಗಿದೆ. ಬೀಚ್ ಬಳಿ ಇರುವ ಸ್ಪೀಡ್ ಬೋಟ್ ಯಾನದ ಪರಿಶೀಲನೆ ಇನ್ನಷ್ಟೆ ನಡೆಯಬೇಕಾಗಿದೆ.