ದೆಹಲಿಯಿಂದ ಬೆಂಗಳೂರಿಗೆ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಬಂದು ನೆಲೆಸಿದ್ದ ಯುವತಿಯೊಬ್ಬಳು ಕಳೆದ ಮೂರು ದಿನಗಳ ಹಿಂದೆ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಮೃತ ಯುವತಿಯನ್ನು ಸೋನಿಯಾ (24) ಎಂದು ಗುರುತಿಸಲಾಗಿದೆ.
ದೆಹಲಿ ಮೂಲದ ಸೋನಿಯಾ ಬೆಂಗಳೂರಿಗೆ ಬಂದು ಖಾಸಗಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ, ನ.25 ಸೋಮವಾರ ರಾತ್ರಿ ತನ್ನ ತಾಯಿಯೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದ್ದಾಳೆ. ಆಗ ಕೆಲಸದ ಸ್ಥಳದಲ್ಲಿನ ಕಷ್ಟವನ್ನೂ ಹಾಗೂ ಕುಟುಂಬದಿಂದ ದೂರ ಇರುವುದರಿಂದ ಆಗುತ್ತಿರುವ ಕಷ್ಟವನ್ನೂ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ತಾನಿದ್ದ ಕೋಣೆಯಲ್ಲಿ ನೇಣು ಬಿಗಿದುಕೊಂಡಿರಬಹುದು ಎಂದು ಶಂಕಿಸಲಾಗಿದೆ.
ನ.26 ಮಂಗಳವಾರ ಬೆಳಗ್ಗೆ ಎಂದಿನಂತೆ ಸ್ಪಾಗೆ ಬರಲಿಲ್ಲ ಎಂದು ಸ್ಪಾ ಮಾಲೀಕ ಯುವತಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದಿದ್ದಾಗ ಅನುಮಾನಗೊಂಡು ಮನೆ ಬಳಿ ಬಂದು ನೋಡಿದ್ದಾನೆ. ಎಷ್ಟೇ ಬಾಗಿಲು ಬಡಿದರೂ ಮನೆ ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಮುರಿದು ನೋಡಿದಾಗ ಯುವತಿ ತನ್ನ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಸಾಕ್ಷಿಗಳನ್ನು ಸಂಗ್ರಹಣೆ ಮಾಡುತ್ತಿದ್ದಾರೆ. ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಸ್ಪಾ ಮಾಲೀಕರು ಹಾಗೂ ಇತರೆ ಸಿಬ್ಬಂದಿಯನ್ನು ವಿಚಾರಣೆ ಮಾಡುತ್ತಿದ್ದಾರೆ.