ಲವಲವಿಕೆ, ಮುದ್ದುಲಕ್ಷ್ಮಿ ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. ಹಾಗಾಗಿ ಆರ್‌ಆರ್ ನಗರ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಗೆ ಪರಿಚಯವಿದ್ದ ಗೆಳತಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಈಗ ಚರಿತ್ ಬಾಳಪ್ಪ ಮೇಲೆ ಎದುರಾಗಿದೆ. ಇನ್ನು ಹಲ್ಲೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪ್ರೀತಿಸುತ್ತೇನೆ ಅಂತ ಹೇಳಿ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ಯುವತಿ ವಾಸ ಮಾಡುತ್ತಿದ್ದ ಮನೆಗೆ ಸಹಚರರ ಜೊತೆ ನುಗ್ಗಿದ ಚರಿತ್ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಅಷ್ಟಲ್ಲದೇ ಯುವತಿ ಬಳಿ ಹಣಕ್ಕೂ ಬೇಡಿಕೆ ಇಟ್ಟಿರುವ ಆರೋಪ ಇದೆ. ಹಣ ಕೊಡದಿದ್ದರೆ ಆಕೆಯ ಖಾಸಗಿ ಫೋಟೋ, ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಚರಿತ್ ವಿರುದ್ಧ ಲೈಂಗಿಕ ದೌರ್ಜನ್ಯ, ಹಲ್ಲೆ, ಕೊಲೆ ಬೆದರಿಕೆ ಆರೋಪಗಳು ಕೇಳಿಬಂದಿವೆ. ಯುವತಿ ನೀಡಿದ ದೂರಿನ ಅನ್ವಯ ಆರೋಪಿ ಚರಿತ್ ಬಾಳಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ, ಚರಿತ್ ಅವರಿಗೆ ಈಗಾಗಲೇ ಮದುವೆಯಾಗಿ ವಿಚ್ಛೇದನ ಕೂಡ ಪಡೆದಿದ್ದಾರೆ. ಡಿವೋರ್ಸ್ ನಂತರವೂ ಅವರು ಮಾಜಿ ಪತ್ನಿಯ ಜೊತೆ ಕಿರಿಕ್ ಮಾಡಿಕೊಂಡಿದ್ದರು.
ಹಲ್ಲೆಯ ವಿಡಿಯೋ ವೈರಲ್
ಈ ಪ್ರಕರಣ ಬೆಳಕಿಗೆ ಬರುತ್ತಲೇ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಚರಿತ್ ಹಾಗೂ ಯುವತಿಯ ಜಗಳದ ಸಂಭಾಷಣೆ ಕೇಳುತ್ತದೆ. ತುಳುವಿನಲ್ಲಿ ಬೈದಾಡಿಕೊಳ್ಳುವ ವಿಡಿಯೋ ಇದಾಗಿದೆ. ನೀನು ಇರುವುದು ನನ್ನೊಂದಿಗೆ. ನೀನು ನನ್ನನ್ನು ಮದುವೆಯಾಗಿದ್ದಿ. ನನ್ನ ಬಾಳನ್ನು, ಮನೆಯವರ ಹಾಳು ಮಾಡಿದ್ದೀಯಾ. ಬಾಗಿಲು ಹಾಕಿ ನೀನು ಯಾರ ಜೊತೆಗೆ ಮಾತನಾಡುತ್ತೀಯಾ? ಎಂದು ಚರಿತ್ ಪ್ರಶ್ನಿಸುವಂತ ವಿಡಿಯೋ ಇದೆ. ಈ ವಿಡಿಯೋ ಬೇಕು ಬೇಕಂತಲೇ ಮಾಡಿದ ಹಾಗೆ ಇದೆ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.