
ಕೋಲ್ಕತ್ತಾ: ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಆರ್ ಜಿ ಕರ್ ಮೆಡಿಕಲ್ ಕಾಲೇಜು ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಂಜಯ್ ರಾಯ್‌ನನ್ನು ದೋಷಿ ಎಂದು ಹೇಳಿ ಕೋರ್ಟ್ ತೀರ್ಪು ಪ್ರಕಟಿಸಿದೆ.
ಕೋಲ್ಕತ್ತಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಅನಿರ್ಬನ್ ದಾಸ್ ಇಂದು ತೀರ್ಪು ಪ್ರಕಟಿಸಿದರು. ಅತ್ಯಾಚಾರ, ಕೊಲೆ ಸೆಕ್ಷನ್ ಗಳಲ್ಲಿ ಅಪರಾಧಿ ಎಂದು ಕೋರ್ಟ್ ತೀರ್ಪು ನೀಡಿದ್ದು ಸೋಮವಾರ (ಜ.20) ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ವಿಚಾರಣೆ ನಡೆಸಿದ 57 ದಿನಗಳಲ್ಲಿ ಕೋರ್ಟ್ ತೀರ್ಪು ಪ್ರಕಟಿಸಿರುವುದು ವಿಶೇಷ.
ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ದೋಷಿಯಾಗಿರುವ ಸಂಜಯ್ ರಾವ್ ನಾನು ಅಮಾಯಕ. ಯಾವುದೇ ಕೃತ್ಯ ಎಸಗಿಲ್ಲ ಎಂದು ಹೇಳಿ ತನ್ನ ಮೇಲಿದ್ದ ಆರೋಪಗಳನ್ನು ನಿರಾಕರಿಸಿದ್ದಾನೆ. ತೀರ್ಪು ಪ್ರಕಟದ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯದ ಕೋಣೆಗೆ ಭಾರೀ ಭದ್ರತೆಯನ್ನು ಒದಗಿಸಲಾಗಿತ್ತು. ಸುಮಾರು 300ಕ್ಕೂ ಹೆಚ್ಚು ಪೊಲೀಸರನ್ನು ಕೋರ್ಟ್ ಆವರಣದ ಸುತ್ತ ನಿಯೋಜಿಸಲಾಗಿತ್ತು.
ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ದೇಶವ್ಯಾಪಿ ಪ್ರತಿಭಟನೆ ನಡೆದಿತ್ತು. ಕೊನೆಗೆ ಈ ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹೈಕೋರ್ಟ್ ಸಿಬಿಐಗೆ ಒಪ್ಪಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅತ್ಯಾಚಾರ ನಡೆದಿದ್ದು ದೃಢ ಎಂದು ಚಾರ್ಜ್‌ಶೀಟ್ ಸಲ್ಲಿಸಿತ್ತು.
ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಕೋಲ್ಕತ್ತ ಪೊಲೀಸರು ಆಗಸ್ಟ್ 10ರಂದು ರಾಯ್‌ನನ್ನು ಬಂಧಿಸಿದ್ದರು. ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ವೈದ್ಯ ವಿದ್ಯಾರ್ಥಿನಿಯ ಮೃತದೇಹ ದೊರೆತ ಮರುದಿನ ಬಂಧನ ನಡೆದಿತ್ತು. ನವೆಂಬರ್ 12 ರಿಂದ ವಿಚಾರಣೆ ಆರಂಭವಾಗಿತ್ತು. ಒಟ್ಟು 50 ಸಾಕ್ಷಿಗಳ ಹೇಳಿಕೆಗಳನ್ನು ಪಡೆಯಲಾಗಿತ್ತು. ಆರೋಪಿಯ ವಿಚಾರಣೆ ಜನವರಿ 9ರಂದು ಕೊನೆಗೊಂಡಿತ್ತು.
ಏನಿದು ಪ್ರಕರಣ?
ಕಳೆದ ಆಗಸ್ಟ್ 9ರಂದು ಬೆಳಗ್ಗೆ ಸ್ನಾತಕೋತ್ತರ ತರಬೇತಿ ನಿರತ ವೈದ್ಯೆಯ ಶವ ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಕೃತ್ಯ ನಡೆಸಿದ್ದ ಆರೋಪಿ ಸಂಜಯ್‌ನನ್ನು ಪೊಲೀಸರು ಬಂಧಿಸಿದ್ದರು. ಅಶ್ಲೀಲ ವೀಡಿಯೋಗಳಿಗೆ ವ್ಯಸನಿಯಾಗಿದ್ದ ಸಂಜಯ್ ಕೊಲೆಯ ನಂತರ ಸಾಕ್ಷ್ಯ ನಾಶಪಡಿಸಲು ರಕ್ತಸಿಕ್ತ ಬಟ್ಟೆಯನ್ನು ತೊಳೆದಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಹಿಂದೆ ಪೊಲೀಸರಿಗೆ ಸೇವಕನಾಗಿದ್ದ ಈತ 4 ಮದುವೆಯಾಗಿದ್ದು, ಪತ್ನಿಯರಿಗೆ ಆಗಾಗ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿತ್ತು.