ಭಾರತ ಮೆಚ್ಚಿದ ಉದ್ಯಮ ರತ್ನ:
ದಶಕಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಜಾರಿಗೆ ತಂದಿದ್ದ ರತನ್ ಟಾಟಾ.!
ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಶ್ರೀಮತಿ ಸೂನಿ ಮತ್ತು ನಾವಲ್ ಹರ್ಮುಸ್ ಜಿ ಟಾಟಾ ದಂಪತಿಯ ಹಿರಿಯ ಮಗನಾಗಿ ರತನ್ ಟಾಟಾ ಬೊಂಬಾಯಿನಲ್ಲಿ 1937ರಲ್ಲಿ ಜನಿಸಿದರು. ರತನ್ ಟಾಟಾ ಅವರಿಗೆ ಭಾರತ ಸರ್ಕಾರವು 2008 ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ.
ರತನ್ ನಾವಲ್ ಟಾಟಾ ( ಡಿಸೆಂಬರ್ 28, 1937)ಅನೇಕ ಪ್ರಮುಖ ಟಾಟಾ ಉದ್ಯಮಗಳಾದ ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಕಂಪನಿಗಳನ್ನು ಸ್ಥಾಪಿಸಿದ್ದರು.
ರತನ್ ಟಾಟಾ ಅವರು ಕೈಗಾರಿಕೋದ್ಯಮ, ವ್ಯಾಪಾರ ಸಾಮ್ರಾಜ್ಯದಲ್ಲಿ ತಮ್ಮದೇ ಆದ ವಿಶೇಷ ಗುರುತನ್ನು ಗಳಿಸಿದ್ದವರು. ವ್ಯಾಪಾರದಲ್ಲಿ ಮಾತ್ರವಲ್ಲದೆ ಸಮಾಜ ಸೇವೆ, ಪರೋಪಕಾರಿಯಲ್ಲೂ ರತನ್ ಟಾಟಾ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಹಳ ದಾನ ಧರ್ಮ ಉದಾರಗಳ ರತನ್ ಟಾಟಾ ನಿಜಕ್ಕೂ ಉದಾತ್ತ ವ್ಯಕ್ತಿಯಾಗಿದ್ದರು.
ದೇಶದಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿದ ನಂತರ, ರತನ್ ಟಾಟಾ ಮೊದಲು ಟಾಟಾ ಗ್ರೂಪ್ ಕಂಪನಿಯಾದ ಟಾಟಾ ಇಂಡಸ್ಟ್ರೀಸ್‌ನಲ್ಲಿ ಸಹಾಯಕರಾಗಿ ಸೇರಿಕೊಂಡರು. ಆ ನಂತರ ಜಮ್ಶೆಡ್‌ಪುರದ ಟಾಟಾ ಪ್ಲಾಂಟ್‌ನಲ್ಲಿ ಕೆಲವು ತಿಂಗಳು ತರಬೇತಿ ಪಡೆದರು. ತರಬೇತಿ ಮುಗಿಸಿ ರತನ್ ಟಾಟಾ ಅವರು ತಮ್ಮ ಜವಾಬ್ದಾರಿಯನ್ನು ಆರಂಭಿಸಿದರು.
ದಶಕಗಳ ಕಾಲ ಟಾಟಾ ಸಮೂಹ ಮುನ್ನಡೆಸಿದ ರತನ್ ಟಾಟಾ ಜನ ಸಾಮಾನ್ಯರೊಂದಿಗೆ ನೇರವಾಗಿ ಬೆರೆತಿದ್ದು ಇಲ್ಲವೇ ಇಲ್ಲವೆನ್ನುವಷ್ಟು ತೀರಾ ಕಡಿಮೆ. ಕಂಪನಿಯ ಕೆಲಸಗಳಲ್ಲಿ ಎಲ್ಲರೊಂದಿಗೂ ಜೊತೆಗೂಡುವುದನ್ನು ಹೊರತುಪಡಿಸಿದರೆ ಉಳಿದಂತೆ ಬಹುತೇಕ ಮೌನಿ. ಅವರದು ಏನಿದರೂ ಕೆಲಸದ ಮೂಲಕವೇ ಮಾತು.
ಹೀಗಾಗಿ ಕಣ್ಣಿಗೆ ಕಾಣದಿದ್ದರೂ, ನೇರವಾಗಿ ಯಾವುದೇ ಸಂಬಂಧ ಹೊಂದಿದ್ದರೂ ರತನ್ ಟಾಟಾ ಉದ್ಯಮ ವಲಯ ಮಾತ್ರವಲ್ಲದೇ ದೇಶವ್ಯಾಪಿ ಅತ್ಯಂತ ಗೌರವ ಪಡೆದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಕಂಡು ಬರುತ್ತಾರೆ. ಉದ್ಯಮಿಗಳನ್ನು ಸದಾ ಕಾಡುವ ಹಗರಣಗಳಿಂದ ಮೊದಲಿನಿಂದಲೂ ದೂರವೇ ಇದ್ದ ಸಂಗತಿ ಅವರ ಜನ ಪ್ರಿಯತೆ, ಗೌರವವನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಇಂಡಿಕಾ, ಟಾಟಾ ನ್ಯಾನೋ ಕಾರುಗಳ ಉತ್ಪಾದನೆ ಮೂಲಕ ದಶಕಗಳ ಹಿಂದೆಯೇ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಜಾರಿಗೆ ತಂದ ಶ್ರೇಯ ರತನ್ ಟಾಟಾ ಅವರದ್ದು.